

ಬೆಳಗಾವಿ: 16 ದಿನಗಳಿಂದ ಬೆಳಗಾವಿ ಗಾಲ್ಫ್ ಮೈದಾನ ಹಾಗೂ ಜಾಧವ ನಗರದ ಪೊದೆಯೊಳಗೆ ಹೋಗಿದೆ ಎನ್ನಲಾದ ಚಿರತೆ ಪತ್ತೆಗೆ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸುಮಾರು 300 ಸಿಬ್ಬಂದಿ ಶಸ್ತ್ರ ಸಜ್ಜಿತವಾಗಿ ಶುಕ್ರವಾರ ಬೃಹತ್ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.
ಕಳೆದ 15 ದಿನಗಳಿಂದ ಅರಣ್ಯ ಇಲಾಖೆಯ 50 ಸಿಬ್ಬಂದಿ ಬೋನಿಟ್ಟು ಪ್ರಯಾಸಪಟ್ಟರೂ ಚಿರತೆ ಕುರುಹು ಪತ್ತೆಯಾಗಿಲ್ಲ. ಹೀಗಾಗಿ ಪೊಲೀಸ್ ಇಲಾಖೆಯ 200ಕ್ಕೂ ಹೆಚ್ಚು ಸಿಬ್ಬಂದಿಯ ಸಹಾಯ ಪಡೆದು ಏಕಕಾಲಕ್ಕೆ ಅರಣ್ಯ ಇಲಾಖೆ ಕಾರ್ಯಾಚರಣೆ ಶುರು ಮಾಡಿದೆ.
ಕಾರ್ಯಾಚರಣೆ ಪೂರ್ವಭಾವಿಯಾಗಿ ಬೆಳಗಾವಿ ಕ್ಲಬ್ ಆವರಣದಲ್ಲಿ ಸಿಬ್ಬಂದಿಗೆ ಡಿಸಿಪಿ ರವೀಂದ್ರ ಗಡಾದೆ, ಎಸಿಪಿ ನಾರಾಯಣ ಭರಮನಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಮಾರ್ಗದರ್ಶನ ನೀಡಿದರು.
ಪೋಲೀಸ್ ಇಲಾಖೆ ಸಿಡಿಮದ್ದುಗಳ ಸಹಿತ ಕಾರ್ಯಾಚರಣೆ ಮಾಡುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿ ಮದ್ದೇರುವ ಗುಂಡು ಹೊಡೆದು ಚಿರತೆಯನ್ನು ಅಸ್ವಸ್ಥಗೊಳಿಸಿ ಬಲೆಗೆ ಹಾಕಲು ಸ್ಪೆಶಲ್ ಶೂಟರ್ಗಳು ಸಹ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.
ಗಾಲ್ಫ್ ಪ್ರದೇಶ, ಹನುಮಾನಗರ, ಕುವೆಂಪು ನಗರ, ದೂರದರ್ಶನ ನಗರ, ಜಾಧವ ನಗರ ಹಾಗೂ ಕ್ಯಾಂಪ್ ಪ್ರದೇಶದ ಜನರು ಮನೆಯಿಂದ ಹೊರಗೆ ಬರಬಾರದೆಂದು ಎಚ್ಚರಿಕೆ ನೀಡಲಾಗಿದೆ.