ಕೊಳ್ಳೇಗಾಲ: ತಾಲೂಕಿನ ಸತ್ತೇಗಾಲ ಗ್ರಾಮದ ಅಗ್ರಹಾರ ಬಡಾವಣೆಯ ಹೊರ ವಲಯದ ಜಮೀನಿನಲ್ಲಿ ಶುಕ್ರವಾರ ಕುರಿಗಾಹಿ ಎದುರೇ ಚಿರತೆಯೊಂದು ಆಡುಮರಿಯನ್ನು ಹೊತ್ತೊಯ್ದಿದೆ.
ಅಗ್ರಹಾರದ ಕುಶಾಲ್ ದನ, ಆಡು ಮರಿಗಳನ್ನು ಜಮೀನಿನ ಬಳಿ ಮೇಯಿಸುತ್ತಿದ್ದರು. ಈ ವೇಳೆ ಪಕ್ಕದಲ್ಲಿದ್ದ ಕಬ್ಬಿನ ಗದ್ದೆಯಲ್ಲಿ ಶಬ್ದ ಬಂದಿತು. ಅತ್ತ ತಿರುಗಿ ನೋಡುತ್ತಿದಂತೆ ಕಬ್ಬಿನ ಗದ್ದೆಯಿಂದ ಚಿರತೆ ಜಿಗಿದು ಹೊರಗೆ ಬಂದು ಮೇಯುತ್ತಿದ್ದ ಆಡು ಮರಿಗಳ ಗುಂಪಿನ ಮೇಲೆ ಎಗರಿದೆ. ಒಂದು ಆಡು ಮರಿಯನ್ನು ಕಚ್ಚಿಕೊಂಡು ಹೊತ್ತೊಯ್ದಿದೆ. ಈ ಘಟನೆ ಕಣ್ಣಾರೆ ಕಂಡ ಕುಶಾಲ್ ಗಾಬರಿಗೊಂಡು ಹೌಹಾರಿದರು. ಅಷ್ಟರಾಗಲೇ ಚಿರತೆ ಆಡು ಮರಿಯನ್ನು ಕಬ್ಬಿನ ಗದ್ದೆಯೊಳಗೆ ಎಳೆದೊಯ್ದಿದೆ ಈ ಬಗ್ಗೆ ಮಾಹಿತಿ ತಿಳಿಸಿ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇನ್ನೊಮ್ಮೆ ಕಂಡರೆ ಮಾಹಿತಿ ನೀಡುವುದಾಗಿ ತೆರಳಿದ್ದಾರೆ. ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ.
ಗುರುವಾರ ಮಹೇಶ್ ಅವರಿಗೆ ಸೇರಿದ ಆಡು ಮರಿಯನ್ನು ಹೊತ್ತೊಯ್ದಿದೆ ಎಂದು ರೈತರು ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಬೋನು ಅಳವಡಿಸಿ ಚಿರತೆ ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.