

ನೆಲಮಂಗಲ: ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ಬಳಿಕ ಸ್ವಗ್ರಾಮಕ್ಕೆ ಬಂದ ಮಾಜಿ ಸೈನಿಕ, ಲ್ಯಾನ್ಸ್ ನಾಯಕರಾಗಿದ್ದ ಎಚ್.ಎಂ.ಶಿವಕುಮಾರ್ ಅವರನ್ನು ಅಭಿಮಾನಿಗಳು ಹಾಗೂ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಸಂಭ್ರಮದಿಂದ ಬರಮಾಡಿಕೊಂಡರು.
ಹೊನ್ನರಾಯನಹಳ್ಳಿ ಭಾಗ್ಯಮ್ಮ ಮತ್ತು ಮೃತ್ಯುಂಜಯ ದಂಪತಿ ಒಬ್ಬನೇ ಮಗ ಶಿವಕುಮಾರ್, 17 ವರ್ಷಗಳ (2004) ಹಿಂದೆ ಸೈನ್ಯಕ್ಕೆ ಸೇರಿದ್ದು, ಮಾ.31 ರಂದು ಸೇವಾವಧಿ ಪೂರ್ಣಗೊಳಿಸಿದ್ದರು. ನಿವೃತ್ತಿ ಬಳಿಕ ಶುಕ್ರವಾರ ಮಧ್ಯಾಹ್ನ ಹುಟ್ಟೂರಿಗೆ ಆಗಮಿಸಿದ ಶಿವಕುಮಾರ್ ಅವರನ್ನು ನಗರದ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಮಾಜಿ ಸೈನಿಕನ ಜತೆ ವಿದ್ಯಾಭ್ಯಾಸ ಮಾಡಿದ್ದ ಸ್ನೇಹಿತರು ಹಾಗೂ ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿದರು.
ಬೆಳ್ಳಿರಥದಲ್ಲಿ ಮೆರವಣಿಗೆ: ಬೆಂಗಳೂರು ನಗರ ರೈಲು ನಿಲ್ದಾಣದಿಂದ ಬಂದ ಮಾಜಿ ಯೋಧನಿಗಾಗಿ ತಾಲೂಕಿನ ಅರಿಶಿಣಕುಂಟೆ ಗ್ರಾಮದ ಬಳಿ ಕನ್ನಡಪರ, ಹಿಂದುಪರ ಸಂಘಟನೆಗಳ ಪದಾಧಿಕಾರಿಗಳು ಮುತ್ತೈದೆಯರಿಂದ ಆರತಿ ಮಾಡಿಸಿ ಬರಮಾಡಿಕೊಂಡರು. ಯೋಧನನ್ನು ಬೆಳ್ಳಿರಥದಲ್ಲಿ ನಗರದ ಮುಖ್ಯರಸ್ತೆಯಲ್ಲಿ ರ‍್ಯಾಲಿ ಮೂಲಕ ಮೆರವಣಿಗೆ ನಡೆಸಿದರು.
ಸ್ವಾಮೀಜಿಗಳಿಂದ ಆಶೀರ್ವಾದ: ನಗರದ ಪವಾಡ ಶ್ರೀ ಬಸವಣ್ಣ ದೇವರಮಠಕ್ಕೆ ಆಗಮಿಸಿದ ಶಿವಕುಮಾರ್, ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಸೇನೆಯಲ್ಲಿರುವ ವೀರಯೋಧರು ಹಾಗೂ ಸೇನೆ ಸೇರಬಯಸುವ ಯುವಕರಿಗೆ ಇದು ಪ್ರೇರಣೆಯಾಗಲಿದೆ ಎಂದು ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.
ಪೂರ್ವಜನ್ಮದ ಪುಣ್ಯದ ಫಲವಾಗಿ ಸೇನೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿತ್ತು. ದೇಶದ ವಿವಿಧೆಡೆ ಕೆಲ ಕಠಿಣ ಸಂದರ್ಭಗಳಲ್ಲೂ ಸೇವೆ ಸಲ್ಲಿಸಿರುವ ಅನುಭವವನ್ನು ಮರೆಯಲಾಗದು. ಸೇನೆಯಲ್ಲಿ ಸೇವೆ ಸಲ್ಲಿಸಿ ಮರಳಿ ಬಂದ ನನಗೆ ಗೌರವಿಸಿರುವುದು ದೇಶವನ್ನು ಕಾಯುತ್ತಿರುವ ಪ್ರತಿಯೊಬ್ಬ ಭಾರತೀಯ ಸೈನಿಕನಿಗೆ ಸ್ಪೂರ್ತಿಯಾಗುವ ಜತೆಗೆ ಜೀವನ ಸಾರ್ಥಕವೆನಿಸಿದೆ ಎಂದು ಶಿವಕುಮಾರ್ ಹರ್ಷಪಟ್ಟರು.