ಕುರುಬರ ಸಂಘದ ಮೇಲಿನ ಆರೋಪ ನಿರಾಧಾರ, ಸಂಘದ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಬೇಡಿ

New Project(3)
Published on

ಬೆಂಗಳೂರು: ಕುರುಬರ ಸಂಘದ ಮೇಲೆ ಟಿ.ಬಿ. ಬಳಗಾವಿ ನೇತೃತ್ವದ ತಂಡ ಮಾಡಿರುವ ಆರೋಪ ನಿರಾಧಾರವಾಗಿದ್ದು, ಸಂಘದ ವಿರುದ್ಧ ಕರೆ ನೀಡಲಾಗಿರುವ ಪ್ರತಿಭಟನೆ ನ್ಯಾಯ ಸಮ್ಮತವಲ್ಲ. ಕೆಲ ನಿರ್ದೇಶಕರು ಕರೆ ಕೊಟ್ಟಿರುವ ಪ್ರತಿಭಟನೆಯಲ್ಲಿ ಸಮಾಜದ ಬಾಂಧವರು ಭಾಗವಹಿಸದಂತೆ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಡಿ. ವೆಂಕಟೇಶ್ ಮೂರ್ತಿ ಮನವಿ ಮಾಡಿದ್ದಾರೆ.

ಖಾಸಗಿ ಹೋಟೆಲ್​ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೆಂಕಟೇಶ್ ಮೂರ್ತಿ, ಕುರುಬರ ಸಂಘದ ಮೇಲಿನ ಅವ್ಯವಹಾರ ಆರೋಪ ಸುಳ್ಳಾಗಿದೆ. ನೂರು ವರ್ಷಗಳ ಇತಿಹಾಸ ಇರುವ ಕುರುಬರ ಸಂಘ ಕಾರ್ಯನಿರ್ವಹಣೆ ಪಾರದರ್ಶಕವಾಗಿದ್ದು, ಯಾವುದೇ ಅನ್ಯಾಯದ ಕೆಲಸ ನಡೆದಿಲ್ಲ. ಸಂಘದ ಪದಾಧಿಕಾರಿಯಾಗಿ ಆಯ್ಕೆ ಆಗದವರು ಮತ್ತು ಸಂಘದ ಚುನಾವಣೆಯಲ್ಲಿ ಸೋತಿರುವ ಕಾರಣಕ್ಕೆ ಹತಾಶರಾಗಿ ಸಂಘದ ಮೇಲೆ ಆರೋಪ ಮಾಡುತ್ತಿದ್ದಾರೆ. ಸಮಾಜದಲ್ಲಿ ಒಡಕು ಮೂಡಿಸುವ ಕೆಲಸವಾಗುತ್ತಿದೆ. ಹೀಗಾಗಿ, ಸಂಘದ ವಿರುದ್ಧ ಕರೆ ನೀಡಲಾಗಿರುವ ಪ್ರತಿಭಟನೆ ನ್ಯಾಯ ಸಮ್ಮತವಲ್ಲ. ಕೆಲ ನಿರ್ದೇಶಕರು ಕರೆ ಕೊಟ್ಟಿರುವ ಪ್ರತಿಭಟನೆಯಲ್ಲಿ ಸಮಾಜದ ಬಾಂಧವರು ಪಾಲ್ಗೊಳ್ಳಬಾರದು ಎಂದು ತಿಳಿಸಿದರು.

ಕರೊನಾ ಕಾರಣಕ್ಕೆ ಸಂಘದ ಸಾಮಾನ್ಯ ಸಭೆ ಮಾಡಲು ಸಾಧ್ಯವಾಗಲಿಲ್ಲ. ಹಣಕಾಸಿನ ವ್ಯವಹಾರ ಪಾರದರ್ಶಕ ಆಗಿದ್ದು, ಎನಾದ್ರೂ ಅನುಮಾನ ಇದ್ದರೆ ಸಂಘದ ಕಚೇರಿ ಸಂಪರ್ಕ ಮಾಡಬಹುದು. ಸಂಘದ ವ್ಯಾಪ್ತಿಯಲ್ಲಿರುವ ಕಟ್ಟಡ ನಿರ್ವಹಣೆಯಲ್ಲಿಯೂ ಯಾವುದೇ ಲೋಪವಾಗಿಲ್ಲ. ಜತೆಗೆ, ಕಾರ್ಯ ಚಟುವಟಿಕೆ ಕುರಿತು ಸ್ವಾಮೀಜಿಗಳು ಹಾಗೂ ಸಮಾಜದ ಪ್ರಮುಖರ ಗಮನಕ್ಕೂ ಮಾಹಿತಿ ನೀಡಿದ್ದೇವೆ. ಇನ್ನು ಸಂಘದ ಬೈಲಾ ತಿದ್ದುಪಡಿ ಬಗ್ಗೆ ಆಡಳಿತಾತ್ಮಕ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ರಾಜ್ಯ ಕುರುಬರ ಸಂಘದ ಅಧ್ಯಕ್ಷ ಟಿ.ಸುಬ್ರಹ್ಮಣ್ಯ ಮಾತನಾಡಿ, ಕುರುಬರ ಸಮಾಜದ ನಾಯಕರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಬರಲು ಕಾರಣರಾದ ಎಚ್.ವಿಶ್ವನಾಥ ಈಗ ಎಲ್ಲಿದ್ದಾರೆ? ಉಪಮುಖ್ಯಮಂತ್ರಿ ಆಗಿದ್ದ ಈಶ್ವರಪ್ಪ ಈಗ ಕೇವಲ ಸಚಿವರಾಗಿದ್ದಾರೆ. ಅವರ ಖಾತೆಯಲ್ಲಿ ಹಸ್ತಕ್ಷೇಪ ಮಾಡಿದ್ರೂ ಯಾರು ಕೇಳದಂತಾಗಿದೆ. ಇನ್ನು ಸಿದ್ದರಾಮಯ್ಯ ಅವರ ಮೇಲೆ ಹಿಜಾಬ್ ವಿಚಾರವಾಗಿ ಗೊಂದಲ ಮಾಡಲಾಗುತ್ತಿದೆ. ಒಟ್ಟಾರೆಯಾಗಿ, ವಿವಾದದ ವಿಚಾರಗಳ ಬಗ್ಗೆ ಸಮಾಜ ಎಚ್ಚರಿಕೆಯಿಂದ ನಿಭಾಯಿಸಬೇಕಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net