ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ಕುಣಿಗಲ್​ ಶಾಸಕ!

kunigal mla ranganath
Published on

ಕುಣಿಗಲ್​: ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನ ಕೂಡಲೇ ಆಸ್ಪತ್ರೆಗೆ ಕರೆತಂದು ಮಾನವೀಯತೆ ಮೆರೆದ ಕುಣಿಗಲ್​ ಶಾಸಕ ಡಾ.ರಂಗನಾಥ್​, ಸ್ವತಃ ಅವರೇ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಿದ್ದಾರೆ.

ಭಾನುವಾರ ರಾತ್ರಿ ಕುಣಿಗಲ್​ ತಾಲೂಕು ಹುತ್ರಿದುರ್ಗ ಹೋಬಳಿಯ ಕಲ್ಲನಾಯಕನಹಳ್ಳಿಯ ಸಮೀಪ ಎರಡು ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಮೂವರು ಗಾಯಗೊಂಡಿದ್ದು, ಈ ಪೈಕಿ ಓರ್ವನಿಗೆ ಗಂಭೀರ ಗಾಯವಾಗಿದೆ. ಗಣೇಶೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅದೇ ರಸ್ತೆಯಲ್ಲೇ ಶಾಸಕರು ಹಿಂತಿರುಗುತ್ತಿದ್ದರು. ಮಾರ್ಗಮಧ್ಯೆ ಅಪಘಾತದಲ್ಲಿ ಗಾಯಗೊಂಡವರನ್ನ ಕಂಡ ಶಾಸಕರು, ತೀವ್ರ ಗಾಯಗೊಂಡಿದ್ದ ವ್ಯಕ್ತಿಯನ್ನ ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ಕರೆತರಲು ತಕ್ಷಣ ವ್ಯವಸ್ಥೆ ಮಾಡಿದರು. ಅಲ್ಲದೆ, ಆಸ್ಪತ್ರೆಗೆ ತೆರಳಿ ತಾವೇ ಖುದ್ದು ಪ್ರಾಥಮಿಕ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದರು.

ಮೂಲತಃ ವೈದ್ಯರಾದ ಡಾ.ರಂಗನಾಥ್​, ಶಾಸಕರಾದ ಬಳಿಕವೂ ಕ್ಷೇತ್ರದ ಹಲವರಿಗೆ ಚಿಕಿತ್ಸೆ ನೀಡುತ್ತಾ ಗಮನಸೆಳೆದಿದ್ದಾರೆ. ಕರೊನಾ ಸಂಕಷ್ಟ ಕಾಲದಲ್ಲೂ ಚಿಕಿತ್ಸೆ ನೀಡಿ ಡಾಕ್ಟರ್​ ರಂಗಣ್ಣ ಎಂದೇ ಜನರ ಮನದಲ್ಲಿ ಉಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net