

ಹನೂರು: ತಾಲೂಕಿನ ಮಂಗಲ-ಹುಲುಸುಗುಡ್ಡೆ ಮಾರ್ಗಮಧ್ಯೆ ಸೋಮವಾರ ಜಿಲ್ಲಿಪಾಳ್ಯ ಮಾರ್ಗದ ಸಾರಿಗೆ ಬಸ್ಸೊಂದು ಕೆಟ್ಟು ನಿಂತ ಪರಿಣಾಮ ಪ್ರಯಾಣಿಕರು ತೊಂದರೆ ಅನುಭವಿಸಿದರು.
ಬೆಳಗ್ಗೆ 8ರ ವೇಳೆಯಲ್ಲಿ ಜಲ್ಲಿಪಾಳ್ಯ ಗ್ರಾಮದಿಂದ ಮೈಸೂರಿಗೆ ತೆರಳುತ್ತಿದ್ದ ಸಾರಿಗೆ ಬಸ್ ಈ ಮಾರ್ಗದಲ್ಲಿ ಕೆಟ್ಟು ನಿಂತಿತು. ಇದರಿಂದ ಕೆಲಸ ಕಾರ್ಯಗಳ ನಿಮಿತ್ತ ಮೈಸೂರು, ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ಜನರು ಹಾಗೂ ಶಾಲಾ, ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳು ಮಾರ್ಗಮಧ್ಯೆದಲ್ಲಿಯೇ ನಿಲ್ಲುವಂತಾಯಿತು. ಬಳಿಕ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬೇರೊಂದು ಬಸ್ ಮೂಲಕ ಪ್ರಯಾಣಿಕರು ತೆರಳಬೇಕಾಯಿತು. ಇದರಿಂದ ಜನರು ತೊಂದರೆ ಅನುಭವಿಸಿದರು.
ಈ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳು ಹಳೆಯದಾಗಿದ್ದು, ಸುಸ್ಥಿತಿಯಲ್ಲಿಲ್ಲ. ಆದ್ದರಿಂದ ಆಗಾಗ್ಗೆ ಮಾರ್ಗಮಧ್ಯೆ ಕೆಟ್ಟು ನಿಲ್ಲುತ್ತಿವೆ. ಕಳೆದ ವಾರದ ಹಿಂದೆ ಇದೇ ವೇಳೆಗೆ ತೆರಳುತ್ತಿದ್ದ ಸಾರಿಗೆ ಬಸ್ ವಡ್ಡರದೊಡ್ಡಿಯ ಬಳಿ ಚಕ್ರದ ನಟ್‌ಗಳು ಕಳಚಿ ಚಾಲಕನ ಸಮಯ ಪ್ರಜ್ಞೆಯಿಂದ ಮಾರ್ಗಮಧ್ಯೆದಲ್ಲಿ ನಿಂತಿತ್ತು. ಇದರಿಂದ ಭಾರಿ ಅನಾಹುತ ತಪ್ಪಿದಂತಾಗಿತ್ತು. ಹಾಗಾಗಿ ಹಳೆಯ ಬಸ್ಸಿನಿಂದಾಗಿ ಈ ಭಾಗದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಹೊಸ ಬಸ್ ಬಿಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ತಿಳಿಸಲಾಗಿದೆ. ಆದರೆ ಈವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಆದ್ದರಿಂದ ಸಂಬಂಧಪಟ್ಟವರು ಇನ್ನಾದರೂ ಇತ್ತ ಗಮನಹರಿಸಿ ಈ ಭಾಗಕ್ಕೆ ಹೊಸ ಅಥವಾ ಸುಸ್ಥಿತಿಯಲ್ಲಿರುವ ಬಸ್ ಬಿಡುವುದರ ಮೂಲಕ ಜನರಿಗೆ ಅನುಕೂಲ ಕಲ್ಪಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಾರಿಗೆ ಇಲಾಖೆಯ ವಿರುದ್ಧ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ರೈತ ಸಂಘಟನೆಯ ಕೂಡಲೂರು ವೆಂಕಟಾಚಲ ಎಚ್ಚರಿಸಿದ್ದಾರೆ.