

ಬೆಂಗಳೂರು: ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ಮುಂದೂಡಲು ರಾಜ್ಯ ಸರ್ಕಾರ ಯಾವುದೇ ತಂತ್ರ ಹೆಣೆದಿಲ್ಲ. ಮಾ.31ರ ಬೆಳಗ್ಗೆ 11ಕ್ಕೆ ನಿಗದಿಯಾಗಿರುವ ಸರ್ವಪಕ್ಷಗಳ ಸಭೆಯಲ್ಲಿ ಗೊಂದಲಕ್ಕೆ ಅಂತಿಮ ಪರಿಹಾರ ಸಿಗುವ ನಿರೀಕ್ಷೆಯಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ವಿಧಾನ ಪರಿಷತ್ನಲ್ಲಿ ಜೆಡಿಎಸ್ ಮರಿತಿಬ್ಬೇಗೌಡ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಈಶ್ವರಪ್ಪ, ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮೀನಾರಾಯಣ ನೇತೃತ್ವದ ಜಿಲ್ಲಾ, ತಾಲೂಕು ಪಂಚಾಯಿತಿ ಕ್ಷೇತ್ರಗಳ ಸೀಮಾ ನಿರ್ಣಯ ಆಯೋಗವು ವರದಿ ತಯಾರು ಬಹುತೇಕ ಅಂತಿಮಕ್ಕೆ ಬಂದಿದೆ. ಈ ನಡುವೆ ಸುಪ್ರೀಂ ಕೋರ್ಟ್ ಆದೇಶದಂತೆ ಒಬಿಸಿಗೆ ರಾಜಕೀಯ ಮೀಸಲು ಕಲ್ಪಿಸುವ ಸಂಬಂಧ ಸರ್ಕಾರದಿಂದ ಪ್ರಮಾಣಪತ್ರ ಸಲ್ಲಿಸಬೇಕಾಗಿದ್ದು, ಮಾ.31ರ ಬೆಳಗ್ಗೆ 11ಕ್ಕೆ ನಿಗದಿಯಾಗಿರುವ ಸರ್ವಪಕ್ಷಗಳ ಸಭೆಯಲ್ಲಿ ಗೊಂದಲಕ್ಕೆ ಅಂತಿಮ ಪರಿಹಾರ ಸಿಗುವ ನಿರೀಕ್ಷೆ ಇದೆ ಎಂದಿದ್ದಾರೆ.
ಇತರ ಹಿಂದುಳಿದ ವರ್ಗದವರ ಮೀಸಲು ಗೊಂದಲ ಬಗೆಹರಿದ ನಂತರ ಚುನಾವಣೆ ನಡೆಸಲು ಬದ್ಧವಾಗಿದೆ. ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಆರ್ಥಿಕ, ಸಾಮಾಜಿಕ (ಜಾತಿ ಗಣತಿ) ಸಮೀಕ್ಷೆ ನಡೆಸಿದ ಎಚ್.ಕಾಂತರಾಜು ನೇತೃತ್ವದ ಸಮಿತಿ ವರದಿಯಲ್ಲಿನ ದತ್ತಾಂಶಗಳನ್ನು ಬಳಸಿಕೊಳ್ಳುವ ಚಿಂತನೆ ನಡೆದಿದೆ ಎಂದು ಈಶ್ವರಪ್ಪ ತಿಳಿಸಿದ್ದಾರೆ.