

ಕೆ.ಆರ್.ಸಾಗರ: ಕೃಷ್ಣರಾಜಸಾಗರ ಜಲಾಶಯದ ಅಣೆಕಟ್ಟೆ ನೀರಿನ ಮಟ್ಟ ಭಾನುವಾರ 100 ಅಡಿಗೆ ಇಳಿದಿದೆ. 124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಅಣೆಕಟ್ಟೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ 7 ಅಡಿಯಷ್ಟು ನೀರಿನ ಸಂಗ್ರಹ ಹೆಚ್ಚಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಕಾವೇರಿ ನದಿ ನೀರನ್ನು ಕುಡಿಯಲು ಅವಲಂಬಿಸಿರುವ ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ಜಿಲ್ಲೆಯ ಜನರಿಗೆ ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆ ಇರಲಾರದು.
ಪ್ರಸ್ತುತ ಬೆಳೆದು ನಿಂತಿರುವ ಬೆಳೆಗಳಿಗೆ ನೀರು ಹರಿಸಲಾಗುತ್ತಿದೆ. 2021ರ ನವೆಂಬರ್ನಲ್ಲಿ ಅಣೆಕಟ್ಟೆ ತುಂಬಿದ ಕಾರಣ ನೀರಿನ ಸಂಗ್ರಹ ಉತ್ತಮವಾಗಿದೆ. ನೀರಿನ ಮಟ್ಟ 60 ಅಡಿಗೆ ತಲುಪಿದರೂ ಕುಡಿಯಲು ಬಳಸಬಹುದಾಗಿದೆ. ನೀರು ಸಂಗ್ರಹ ಮಟ್ಟ ಕುಸಿಯುತ್ತಿರುವ ಕಾರಣ ಅಣೆಕಟ್ಟೆ ಬರಿದಾಗಿ ಕಾಣಿಸುತ್ತಿದೆ.
ಉತ್ತಮವಾಗಿದೆ ನೀರಿನ ಸಂಗ್ರಹ: ಅಣೆಕಟ್ಟೆಯಲ್ಲಿ ಭಾನುವಾರ 100.40 (ಗರಿಷ್ಠ 124.80) ಅಡಿ, ಒಳಹರಿವು 665 ಕ್ಯೂಸೆಕ್, ಹೊರ ಹರಿವು 3972 ಕ್ಯೂಸೆಕ್, 23.269 (ಗರಿಷ್ಠ 49.454) ಟಿಎಂಸಿ ನೀರು ಸಂಗ್ರಹವಾಗಿದೆ. ಹಿಂದಿನ ಆರು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಉತ್ತಮವಾಗಿದೆ.
ವರ್ಷ ಸಂಗ್ರಹ ಮಟ್ಟ (ಅಡಿಗಳಲ್ಲಿ)
2016 - 80.52
2017 - 73.21
2018 - 73.53
2019 - 91.08
2020 - 99.92
2021 - 93.75
ಐದು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಉತ್ತಮವಾಗಿದೆ. ಡ್ರಿಪ್ ಯೋಜನೆಯಡಿ ಹಳೆಯ ಗೇಟುಗಳನ್ನು ಬದಲಾವಣೆ ಮಾಡಿದ್ದರಿಂದ ಸೋರಿಕೆ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗುವುದಿಲ್ಲ.
| ಕೆ.ಜೆ.ವಿಜಯಕುಮಾರ್ ಅಧೀಕ್ಷಕ ಇಂಜಿನಿಯರ್, ಕಾವೇರಿ ನೀರಾವರಿ ನಿಗಮ, ಮಂಡ್ಯ ವೃತ್ತ