

ತುಮಕೂರು: ಮನೆ ಮಾಲೀಕನ ಸಾಲಕ್ಕೆ 35 ಮನೆಗಳ ಬಾಡಿಗೆದಾರರು ಅತಂತ್ರರಾಗಿದ್ದಾರೆ. ಲಕ್ಷಾಂತರ ರೂಪಾಯಿ ಹಣ ಕೊಟ್ಟು ಮನೆ ಲೀಸ್ಗೆ ಹಾಕಿಸಿಕೊಂಡಿದ್ದ ಬಾಡಿಗೆದಾರರು ಇತ್ತ ಹಣವೂ ಇಲ್ಲದೆ, ಅತ್ತ ಮನೆಯೂ ಇಲ್ಲದೆ ಕಂಗಾಲಾಗಿದ್ದಾರೆ.
ತುಮಕೂರಿನ ಬನಶಂಕರಿಯ 2ನೇ ಕ್ರಾಸ್ನಲ್ಲಿ ಮಂಜುನಾಥ್ ಎಂಬುವವರಿಗೆ ಸೇರಿದ ಕಟ್ಟಡದಲ್ಲಿ 35 ಕುಟುಂಬ ವಾಸವಿದೆ. 35 ಮಂದಿ ಬಾಡಿಗೆದಾರರಿಗೆ ಒಂದೊದು ಮನೆಯನ್ನು 5 ರಿಂದ 8 ಲಕ್ಷ ರೂ.ಗೆ ಲೀಸ್ಗೆ ಪಡೆದಿದ್ದಾರೆ. ಆದರೆ, ಈ ಮನೆ ಮೇಲೆ ಬ್ಯಾಂಕ್ನಿಂದ ಸಾಲ ಪಡೆದಿದ್ದ ಮನೆ ಮಾಲೀಕ ಮಂಜುನಾಥ್, ಹಲವು ವರ್ಷಗಳಿಂದ ಸಾಲದ ಕಂತು ಪಾವತಿಸಿಲ್ಲ. ಸಾಲದ ಹಣ ಕಟ್ಟದೇ ಕಳ್ಳಾಟ ಆಡುತ್ತಿದ್ದ ಮಂಜುನಾಥ್ರ ಮನೆಗಳನ್ನು ಸಾಲ ಕೊಟ್ಟ ಖಾಸಗಿ ಬ್ಯಾಂಕ್ ಜ್ಪತಿ ಮಾಡಿಕೊಳ್ಳಲು ಮುಂದಾಗಿದೆ.
ಕೂಡಲೇ ಮನೆ ಖಾಲಿ ಮಾಡುವಂತೆ ಖಾಸಗಿ ಬ್ಯಾಂಕ್ ಸೂಚಿಸಿದೆ. ಅತ್ತ ಲೀಸ್ಗೆ ಕೊಟ್ಟಿದ್ದ ಹಣವನ್ನು ವಾಪಸ್ ಕೊಡಿ ಅಂತ ಮನೆ ಮಾಲೀಕ ಮಂಜುನಾಥ್ರನ್ನ ಕೇಳಿದ್ರೆ ನನ್ನ ಬಳಿ ಹಣವಿಲ್ಲ ಎನ್ನುತ್ತಿದ್ದಾರೆ. ಅವತ್ತು ಕೊಡ್ತೀನಿ, ಇವತ್ತು ಕೊಡ್ತೀನಿ ಅಂತ 6 ತಿಂಗಳಿಂದ ಸಬೂಬು ಹೇಳಿಕೊಂಡೇ ಬರುತ್ತಿದ್ದಾರೆ. ದಿಕ್ಕುತೋಚದ ಬಾಡಿಗೆದಾರರು ತಮ್ಮ ಹಣ ವಾಪಸ್ ಕೊಡಿಸುವಂತೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ಗೆ ದೂರು ನೀಡಿದ್ದಾರೆ.