ಪ್ರೇಯಸಿಯ ಅಂತ್ಯಕ್ರಿಯೆ ನಡೆದ ಸ್ಥಳದಲ್ಲೇ ಪ್ರಿಯಕರ ಆತ್ಮಹತ್ಯೆ! ತಡರಾತ್ರಿ ರುದ್ರಭೂಮಿಯಲ್ಲಿ ನಡೀತು ಹೃದಯವಿದ್ರಾವಕ ಘಟನೆ

chandan love case
Published on

ಕೆ.ಆರ್​.ಸಾಗರ: ಪ್ರಿಯತಮೆಯ ಅಂತ್ಯಸಂಸ್ಕಾರ ನಡೆದ ಸ್ಥಳದಲ್ಲೇ ಪ್ರಿಯಕರ ಪೆಟ್ರೋಲ್​ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಮೈಸೂರಿನ ಕೆ.ಆರ್​.ಸಾಗರದಲ್ಲಿ ಸಂಭವಿಸಿದೆ.

ಬೆಳಗೊಳ ಗ್ರಾಮದ ದಿ.ಕುಮಾರ್​ ಅವರ ಪುತ್ರ ಚಂದನ್​(20) ಆತ್ಮಹತ್ಯೆ ಮಾಡಿಕೊಂಡವ. ಮೈಸೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈತ ಬೆಳಗೊಳ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದ.

ಚಂದನ್​ನ ಪ್ರಿಯತಮೆ 4 ದಿನಗಳ ಹಿಂದೆ ಮನೆಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಳು. ಆಕೆಯ ಕುಟುಂಬಸ್ಥರು ಯುವತಿಯ ಚಿತೆಗೆ ರುದ್ರಭೂಮಿಯಲ್ಲಿ ಅಗ್ನಿಸ್ಪರ್ಶ ಮಾಡಿ ಮನೆಗೆ ತೆರಳಿದ್ದರು. ಪ್ರೀತಿಸಿದ ಯುವತಿ ಇನ್ನಿಲ್ಲ ಎಂಬ ಸುದ್ದಿ ಕೇಳಿ ಚಂದನ್​ ತುಂಬಾ ನೊಂದಿದ್ದ. ಆಕೆ ಮೃತಪಟ್ಟ ಮೂರು ದಿನಕ್ಕೆ ಅಂದರೆ ಮಂಗಳವಾರ(ನ.31) ರಾತ್ರಿ ಆಕೆಯ ಚಿತಾಭಸ್ಮದ ಸ್ಥಳದಲ್ಲೇ ಯುವಕ ಪೆಟ್ರೋಲ್​ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬುಧವಾರ ಬೆಳಗ್ಗೆ ವಿಚಾರ ಗೊತ್ತಾಗಿದೆ. ಸಾವಿಗೂ ಮುನ್ನ ಆತ ಚಿತಾಭಸ್ಮದ ಬಳಿ ಸ್ಕೂಟರ್​ ನಿಲ್ಲಿಸಿ, ಅದರ ಮೇಲೆ ಪ್ರಿಯತಮೆಯ ವೇಲ್​ ಇಟ್ಟಿದ್ದಾನೆ.

"ನಿನ್ನನ್ನು ಬಹಳ ಪ್ರೀತಿ ಮಾಡುತ್ತಿದ್ದೆ. ನೀನು ಇರದೆ ನಾನು ಕೂಡ ಇರಲಾರೆ. ನೀನು ಇಲ್ಲದೆ ನಾನು ಏಕೆ ಭೂಮಿ ಮೇಲೆ ಇರಲಿ. ನಿನ್ನ ಬಳಿ ಬರುತ್ತಿರುವೆ. ಜೀವನ ಜಿಗುಪ್ಸೆಯಾಗಿದೆ. ನನ್ನ ಸಾವಿಗೆ ನಾನೇ ಕಾರಣ' ಎಂದು ಪತ್ರ ಬರೆದಿಟ್ಟು ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾಗಿದ್ದಾನೆ.

ಬುಧವಾರ ಬೆಳಗ್ಗೆ ಯುವಕನ ಶವ ಕಂಡ ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಸರ್ಕಲ್​ ಇನ್​ಸ್ಪೆಕ್ಟರ್​ ಯೋಗೇಶ್​, ಕೆ.ಆರ್​.ಸಾಗರ ಠಾಣೆ ಸಬ್​ ಇನ್​ಸ್ಪೆಕ್ಟರ್​ ಲಿಂಗರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳದಲ್ಲಿದ್ದ ಮೊಬೈಲ್​, ಬೈಕ್​ ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಮಂಗಳವಾರ ರಾತ್ರಿ ಬಹುಹೊತ್ತು ನಮ್ಮೊಂದಿಗೆ ಮಾತನಾಡಿದ್ದ. ನಂತರ ಅಲ್ಲಿಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಆತನ ಸ್ನೇಹಿತರು ತಿಳಿಸಿದ್ದಾರೆ. ಕೆ.ಆರ್​.ಸಾಗರ ಠಾಣೆಯಲ್ಲಿ ಮೃತನ ಸೋದರ ಮಾವ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net