40 ಲಕ್ಷ ರೂ. ಕೊಟ್ರೆ, ತಕ್ಷಣ 1 ಕೋಟಿ ಸಿಗುತ್ತೆ! ಕೊಳ್ಳೇಗಾಲದವನ ಮಾತು ನಂಬಿ ಸಂಕಷ್ಟಕ್ಕೆ ಸಿಲುಕಿದ ನಾಗಮಂಗಲದವ

money
Published on

ಕೊಳ್ಳೇಗಾಲ: ನೀವು ನಮಗೆ 40 ಲಕ್ಷ ರೂಪಾಯಿ ಕೊಡಿ, ನಾವು ನಿಮಗೆ 1 ಕೋಟಿ ರೂಪಾಯಿ ಅಸಲಿಯನ್ನೇ ಹೋಲುವ ನೋಟು ಕೊಡ್ತೀವಿ ಎಂದು ಪುಸಲಾಯಿಸಿದ 9 ಜನರ ತಂಡವೊಂದು ಸಿನಿಮೀಯ ರೀತಿಯಲ್ಲಿ ವ್ಯಕ್ತಿಯೊಬ್ಬರಿಂದ ಹಂತಹಂತವಾಗಿ 40 ಲಕ್ಷ ರೂಪಾಯಿ ದೋಚಿ ಪರಾರಿಯಾಗಿದೆ.

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕು ಎಲದಳ್ಳಿ ಮೂಲದ ನಿವಾಸಿ, ಬೆಂಗಳೂರಿನ ಶಂಕರ್​ ಪಿನಿಕಲ್​ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಶಂಕರ್​ ಹಣ ಕಳೆದುಕೊಡವರು. ಕೊಳ್ಳೇಗಾಲ ತಾಲೂಕಿನ ತೆಳ್ಳನೂರು ಗ್ರಾಮದ ನಿವಾಸಿ ಶಿವು, ಹನೂರು ತಾಲೂಕಿನ ಕಣ್ಣೂರು ಗ್ರಾಮದ ಮಹೇಶ್​, ರಿಸರ್ವ್​ ಬ್ಯಾಂಕ್​ ಆಫ್​ ಇಂಡಿಯಾ ನಿವೃತ್ತ ನೌಕರ ಎಂದು ಹೇಳಿಕೊಂಡ ಮತೀನ್​, ಈತನ ಸ್ನೇಹಿತ ಮೂಷಾ, ಇಬ್ಬರು ಕಾರು ಚಾಲಕರು ಹಾಗೂ ಮೂವರು ಪೊಲೀಸ್​ ವೇಷಧಾರಿಗಳು ಆರೋಪಿಗಳು.

ಶಂಕರ್​ರ ಕಾರು ಚಾಲಕ ಕೊಳ್ಳೇಗಾಲ ಮೂಲದ ರಘು ಎಂಬಾತನಿಗೆ ಆರೋಪಿಗಳಾದ ಶಿವು ಮತ್ತು ಮಹೇಶ್​ನ ಪರಿಚಯವಿತ್ತು. ನಮಗೆ ಆರ್​ಬಿಐನ ನಿವೃತ್ತ ನೌಕರರೊಬ್ಬರ ಪರಿಚಯ ಇದೆ. ಅವರಿಗೆ 40 ಲಕ್ಷ ರೂ. ನೀಡಿದರೆ, ವಾಪಸ್​ 1 ಕೋಟಿ ರೂ. ಕೊಡ್ತಾರೆ. ಯಾರದರೂ ಅಸಲಿ ನೋಟು ಕೊಡುವವರಿದ್ದರೆ ತಿಳಿಸು, ಒಳ್ಳೆಯ ಲಾಭ ಇದೆ ಎಂದು ಶಿವು ಮತ್ತು ಮಹೇಶ್​ ಇಬ್ಬರೂ ರಘುಗೆ ಹೇಳಿದ್ದರು. ಈ ವಿಚಾರವನ್ನ ತನ್ನ ಯಜಮಾನ ಶಂಕರ್​ಗೆ ರಘು ತಿಳಿಸಿದ್ದ. ಇದೇ ವಿಚಾರವಾಗಿ ರಘು ಮತ್ತು ಶಂಕರ್ ಇಬ್ಬರೂ ಆರೋಪಿಗಳನ್ನ ಭೇಟಿಯಾಗಿದ್ದರು. ಆರಂಭದಲ್ಲಿ ಥೇಟ್​ ಮೂರ್ನಾಲ್ಕು ಅಸಲಿ ನೋಟು ಎಂಬಂತಿರುವ ನಕಲಿ ನೋಟು ಕೊಟ್ಟು ಶಂಕರ್​ನನ್ನು ಬಲೆಗೆ ಬೀಳಿಸಿಕೊಂಡ ಶಿವು, ಮಹೇಶ್​, ಮತೀನ್​ ಹಾಗೂ ಮೂಷಾ ಎಂಬುವರು 40 ಲಕ್ಷ ರೂಪಾಯಿ ಕೊಡುವಂತೆ ಶಂಕರ್​ಗೆ ಒಪ್ಪಿಸಿದ್ದರು.

ಅದರಂತೆ ಶಂಕರ್​ 2021ರ ಡಿ.7ರಂದು ಶ್ರೀರಂಗಪಟ್ಟಣದಲ್ಲಿ ಆರೋಪಿಗಳಿಗೆ 10 ಲಕ್ಷ ರೂಪಾಯಿ ಕೊಟ್ಟಿದ್ದರು. ಉಳಿದ 30 ಲಕ್ಷ ರೂ.ಗಳ ಪೈಕಿ 25 ಲಕ್ಷ ರೂ. ನಗದು ಹಾಗೂ 5 ಲಕ್ಷ ರೂ.ಗೆ ಚೆಕ್​ ಅನ್ನು ವಾರದ ಬಳಿಕ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಬಳಿ ತಂದು ನೀಡಿದ್ದರು. ಬಳಿಕ ಆರೋಪಿಗಳು 1 ಕೋಟಿ ರೂ. ನೀಡದೆ ಪಂಗನಾಮ ಹಾಕಿ ನಾಪತ್ತೆಯಾಗಿದ್ದಾರೆ. ಇದಾದ ಒಂದೆರಡು ವಾರದಲ್ಲಿ 2 ಬಾರಿ ಶಂಕರ್​ಗೆ ಕರೆ ಮಾಡಿದ ಆರೋಪಿಗಳು, 'ನಿನ್ನ ಹಣ ನಿನಗೆ ಬರುತ್ತದೆ. ಯಾವುದೇ ಮೋಸ ಆಗುವುದಿಲ್ಲ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುತ್ತೇವೆ' ಎಂದು ಬೆದರಿಕೆ ಹಾಕಿದ್ದಾರೆ. ಆರೋಪಿಗಳಿಂದ ಮೋಸ ಹೋದ ಶಂಕರ್​, ಫೆ.10ರ ರಾತ್ರಿ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಬ್​ಇನ್ಸ್​ಪೆಕ್ಟರ್​ ಮಂಜುನಾಥ್​ ತನಿಖೆ ಕೈಗೊಂಡಿದ್ದಾರೆ.

ನಕಲಿ ನೋಟು ಜಾಲ ಶಂಕೆ: ಪಂಗನಾಮ ಹಾಕಿರುವ ಆರೋಪಿಗಳ ತಂಡ ಖೋಟಾ ನೋಟು ಚಲಾವಣೆ ಮಾಡುತ್ತಿದ್ದರೆಂಬ ಶಂಕೆ ವ್ಯಕ್ತವಾಗಿದೆ. ಶಂಕರ್​ ಕಾರು ಚಾಲಕ ರಘುಗೆ ಆರೋಪಿಗಳಾದ ಮಹೇಶ್​ ಮತ್ತು ಶಿವು ಅವರು ತಮಗೆ ರಿಸರ್ವ್​ ಬ್ಯಾಂಕ್​ ಇಂಡಿಯಾದಲ್ಲಿ ಕೆಲಸ ಮಾಡಿ ನಿವೃತ್ತನಾಗಿರುವ ನೌಕರನ ಪರಿಚಯವಿದೆ. ನೀವು 40 ಲಕ್ಷ ರೂ. ನೀಡಿದರೆ ಅಸಲಿ ನೋಟನ್ನೇ ಹೋಲುವ 1 ಕೋಟಿ ರೂ. ನೀಡುತ್ತಾರೆ ಎಂದು ಪದೇಪದೆ ಹೇಳುತ್ತಿದ್ದರೆನ್ನಲಾಗಿದೆ. ಹಾಗಾಗಿ, ಪ್ರಕರಣದ ಹಿಂದೆ ನಕಲಿ ನೋಟಿನ ಜಾಲ ಕೆಲಸ ಮಾಡುತ್ತಿದೆಯೇ ಎಂಬ ಅನುಮಾನ ಮೂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net