

ಕೋಲಾರ: ನೂರಾರು ಕನಸಿನ ಬುತ್ತಿಯೊಂದಿಗೆ ವೈವಾಹಿಕ ಜೀವನದ ಹೊಸ್ತಿಲಿನಲ್ಲಿದ್ದ ಚೈತ್ರಾ, ಆರತಕ್ಷತೆ ವೇಳೆ ಕುಸಿದು ಬಿದ್ದು ವಿಧಿಯಾಟಕ್ಕೆ ಜೀವ ತೆತ್ತರೂ 7 ಜನರ ಜೀವ ಉಳಿಸಿ ಸಾರ್ಥಕತೆ ಮೆರೆದಿದ್ದಾರೆ. ಬಾಳಿ ಬದುಕಬೇಕಿದ್ದ ಚೈತ್ರಾ, ಕೇವಲ 24 ವರ್ಷಕ್ಕೆ ಬದುಕಿನ ಪಯಣ ಮುಗಿಸಿದ ಸುದ್ದಿ ಕೇಳಿ ರಾಜ್ಯದ ಜನತೆಯೂ ಮರುಕಪಟ್ಟರು. ಇನ್ನೇನು ದಾಂಪತ್ಯ ಜೀವನಕ್ಕೆ ಕಾಲಿಡಬೇಕು ಅನ್ನುಷ್ಟರಲ್ಲಿ ಆಕೆಯ ಬದುಕಿಗೆ ಕೊಳ್ಳಿ ಇಟ್ಟ ಆ ವಿಧಿಯನ್ನ ಲೆಕ್ಕವಿಲ್ಲದಷ್ಟು ಮಂದಿ ಶಪಿಸಿದ್ದಾರೆ. ಚೈತ್ರಾ ಬದುಕಿದ್ದರೆ ವಿಜ್ಞಾನಿಯಾಗುತ್ತಿದ್ದರು...
ಹೌದು, ಶ್ರೀನಿವಾಸಪುರ ತಾಲೂಕಿನ ಕೊಡಿಚೆರವು ಗ್ರಾಮದ ಚೈತ್ರಾ, ಕೃಷಿಯಲ್ಲಿ ದೊಡ್ಡ ಸಾಧನೆ ಮಾಡಬೇಕೆಂಬ ಆಸೆಯಿಂದ ಬಿಎಸ್ಸಿ ನಂತರ ಎಂಎಸ್ಸಿ ಬಯೋಕೆಮಿಸ್ಟ್ರಿ ಮಾಡಿದ್ದರು. ಚಿಂತಾಮಣಿ ತಾಲೂಕಿನ ಕೈವಾರ ಬಳಿಯ ಶ್ರೀ ಬೈರವೇಶ್ವರ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದ ಚೈತ್ರಾಗೆ, ಸಂಶೋಧನೆ ಮೇಲೂ ತುಂಬಾ ಆಸಕ್ತಿ ಇತ್ತು, ಪಿಎಚ್ಡಿ ಮಾಡಲು ತಯಾರಿ ಮಾಡಿಕೊಂಡಿದ್ದರು. ಕೃಷಿ ಕ್ಷೇತ್ರದಲ್ಲಿ ಡಾ.ಸ್ವಾಮಿನಾಥನ್ ರೀತಿಯಲ್ಲಿ ಶ್ರೇಷ್ಠ ವಿಜ್ಞಾನಿ ಆಗಬೇಕೆಂಬ ಆಸೆ ಹೊಂದಿದ್ದರು. ಆದರೆ, ವಿಧಿಯಾಟವೇ ಬೇರೆಯಾಗಿತ್ತು.
ಚೈತ್ರಾಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯ ಯುವಕನೊಂದಿಗೆ ಮದುವೆ ನಿಶ್ಚಯವಾಗಿತ್ತು. ಶ್ರೀನಿವಾಸಪುರದ ಮಾರುತಿ ಸಭಾ ಮಂಟಪದಲ್ಲಿ ಫೆ.6ರಂದು ಆರತಕ್ಷತೆ ನಡೆಯುತ್ತಿದ್ದಾಗ ಚೈತ್ರಾ ಕುಸಿದು ಬಿದ್ದು ಪ್ರಜ್ಞೆ ತಪ್ಪಿದರು. ಕಾರ್ಯಕ್ರಮಕ್ಕೆ ಬಂದಿದ್ದ ಕುಟುಂಬದ ವೈದ್ಯರು ತಕ್ಷಣ ಪರೀಕ್ಷೆ ಮಾಡಿ, ಸ್ಥಳೀಯ ಆಸ್ಪತ್ರೆಗೆ ಸೇರಿಸಿದರು. ಬಳಿಕ ಬೆಂಗಳೂರಿನ ನಿಮ್ಹಾನ್ಸ್ಗೆ ರವಾನಿಸಲಾಯಿತು. ಮಿದುಳು ನಿಷ್ಕ್ರಿಯವಾಗಿದ್ದರಿಂದ ಬದುಕುವುದು ಕಷ್ಟವೆಂದು ವೈದ್ಯರು ಕುಟುಂಬದವರ ಗಮನಕ್ಕೆ ತಂದಾಗ, ಚೈತ್ರಾಳ ಕಣ್ಣು, ಹೃದಯ, ಕಿಡ್ನಿ ದಾನ ಮಾಡಲು ಒಪ್ಪಿ ಚಿರನಿದ್ರೆಗೆ ಜಾರಲು ಅವಕಾಶ ಮಾಡಿಕೊಟ್ಟಿದ್ದಾರೆ.
ನೋವಿನಲ್ಲೂ ಮಗಳ ಅಂಗಾಂಗ ದಾನ ಮಾಡಿದ ಕುಟುಂಬಸ್ಥರ ಕಾರ್ಯಕ್ಕೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗಿದೆ. ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟ್ವಿಟರ್ ಮೂಲಕ ಚೈತ್ರಾಗಳಿಗೆ ಶ್ರದ್ಧಾಂಜಲಿ ಸಲ್ಲಿಸಿ, ಅಂಗಾಂಗ ದಾನವನ್ನು ಪ್ರಶಂಸಿದ್ದಾರೆ. ಚೈತ್ರಾಳ ಅಂತ್ಯಕ್ತಿಯೆ ಫೆ.12(ಶನಿವಾರ) ಹುಟ್ಟೂರು ಕೊಡಿಚೆರವಿನಲ್ಲಿ ನೆರವೇರಿತು.
ನನ್ನ ಮಗಳು ಮನೆತನದ ಗೌರವ, ಕೀರ್ತಿ ಉಳಿಸಿದ್ದಾಳೆ. ಆಕೆ ಸತ್ತಿಲ್ಲ, 7 ಜನರ ಜೀವಕ್ಕೆ ರಕ್ಷಣೆ ನೀಡಿದ್ದಾಳೆ. ಇಂತಹ ಮಗಳನ್ನು ಪಡೆದ ನಾವು ಧನ್ಯರು ಎನ್ನುತ್ತಲೇ ಚೈತ್ರಾಳ ತಂದೆ ರಾಮಣ್ಣ ಕಣ್ಣೀರಿಟ್ಟ ದೃಶ್ಯ ಮನಕಲಕುವಂತಿದೆ. ಬಾಳಿ ಬದುಕಿಬೇಕಿದ್ದ ಚೈತ್ರಾ, ಇಷ್ಟು ಬೇಗ ಬದುಕಿನ ಯಾತ್ರೆ ಮುಗಿಸುತ್ತಾಳೆ ಎಂದು ಆಕೆಯ ತಂದೆ-ತಾಯಿ, ಬಂಧು-ಬಳಗ ಯಾರೂ ಊಹಿಸಿರಲಿಲ್ಲ.