

ಬೆಂಗಳೂರು: ನಾಡಪ್ರಭು ಕೆಂಪೇಗೌಡರ ಗೌರವಾರ್ಥ ಈ ವರ್ಷದಿಂದ ರಾಜ್ಯ ಸರ್ಕಾರ ಕೊಡಮಾಡುತ್ತಿರುವ 'ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ'ಗೆ ಹಿರಿಯ ರಾಜಕಾರಣಿ ಎಸ್.ಎಂ.ಕೃಷ್ಣ, ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಮತ್ತು ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಕುರಿತು ಮಾಹಿತಿ ನೀಡಿರು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಜೂ.27ರಂದು ವಿಧಾನಸೌಧದಲ್ಲಿ ನಡೆಯಲಿರುವ ಕೆಂಪೇಗೌಡರ 513ನೇ ಜಯಂತ್ಯುತ್ಸವದಲ್ಲಿ ಎಸ್.ಎಂ.ಕೃಷ್ಣ, ಎನ್.ಆರ್.ನಾರಾಯಣ ಮೂರ್ತಿ ಮತ್ತು ಪ್ರಕಾಶ್ ಪಡುಕೋಣೆ ಅವರಿಗೆ ತಲಾ 5 ಲಕ್ಷ ರೂಪಾಯಿ ನಗದುಸಹಿತ 'ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ'ಯನ್ನು ಸಿಎಂ ಬಸವರಾಜ ಬೊಮ್ಮಾಯಿ ಪ್ರದಾನ ಮಾಡುವರು ಎಂರು ತಿಳಿಸಿದ್ದಾರೆ.
ಮೂವರು ಗಣ್ಯರೂ ಬೆಂಗಳೂರಿನ ಬೆಳವಣಿಗೆಗೆ ಮತ್ತು ಕೀರ್ತಿಗೆ ತಮ್ಮದೇ ಆದ ಅನನ್ಯ ವಿಧಾನಗಳ ಮೂಲಕ ಅನುಪಮ ಕೊಡುಗೆ ನೀಡಿದ್ದಾರೆ. ಸಾಧಕರನ್ನು ಆಯ್ಕೆ ಮಾಡಲು ರಾಜ್ಯ ಸರ್ಕಾರದ ಸ್ಟಾರ್ಟಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿತ್ತು. ಇದರಲ್ಲಿ ಉದ್ಯಮಿ ಮೋಹನದಾಸ್ ಪೈ, ವಿವೇಕಾನಂದ ಯೂತ್ ಮೂವ್ಮೆಂಟ್ ಸ್ಥಾಪಕ ಆರ್.ಬಾಲಸುಬ್ರಹ್ಮಣ್ಯಂ, ನಿವೃತ್ತ ಐಎಎಸ್ ಅಧಿಕಾರಿ ಎಂ.ಕೆ.ಶಂಕರಲಿಂಗೇಗೌಡ ಅವರು ಸದಸ್ಯರಾಗಿದ್ದರು. ಕೆಂಪೇಗೌಡ ಪಾರಂಪರಿಕ ತಾಣ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಆರ್. ವಿನಯದೀಪ್ ಅವರು ಸದಸ್ಯ ಕಾರ್ಯದರ್ಶಿ ಆಗಿದ್ದರು.