

ಚಿಂತಾಮಣಿ: ಚಿಕ್ಕಬಳ್ಳಾಪುರ ಜಿಲ್ಲೆಯ ಹಿರಿಯ ಸಾಹಿತಿ, ನಿವೃತ್ತ ಪ್ರಾಂಶುಪಾಲ ಕೈವಾರದ ಶ್ರೀ ಕೈಪು ಲಕ್ಷ್ಮೀನರಸಿಂಹಶಾಸ್ತ್ರಿ(82) ಅವರು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ತಮ್ಮ ನಿವಾಸದಲ್ಲಿ ಶುಕ್ರವಾರ ಸಂಜೆ ನಿಧನರಾದರು.
2012ರಲ್ಲಿ ನಡೆದ ಚಿಕ್ಕಬಳ್ಳಾಪುರ ಜಿಲ್ಲೆಯ ಎರಡನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಶ್ರೀಯುತರು ಕೈವಾರ ಶ್ರೀಯೋಗಿನಾರೇಯಣ ತಾತಯ್ಯನವರ ಎಲ್ಲ ಗ್ರಂಥಗಳಿಗೆ ವ್ಯಾಖ್ಯಾನ ತಾತ್ಪರ್ಯ ರಚಿಸಿದ್ದಾರೆ. ಕೈವಾರದಿಂದ ಪ್ರಕಟವಾಗುವ ಮಲ್ಲಾರ ಮಾಸಪತ್ರಿಕೆಗೆ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಶ್ರೀಯುತರು ವಿದ್ವಾಂಸರಾಗಿದ್ದು, ಹಲವಾರು ಗ್ರಂಥಗಳನ್ನು ರಚಿಸಿದ್ದು, ಕಥೆ-ಕಾದಂಬರಿ-ಲೇಖನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಸಂಗೀತ ಕಲಾವಿದರೂ ಆಗಿದ್ದು, ಶಾಸ್ತ್ರೀಯ ಸಂಗೀತ, ಮೃದಂಗವಾದನದಲ್ಲಿ ಪಾಂಡಿತ್ಯ ಪಡೆದಿದ್ದರು.
ಕೈಪು ಲಕ್ಷ್ಮೀನರಸಿಂಹಶಾಸ್ತ್ರಿ ಅವರ ಅಂತ್ಯಕ್ರಿಯೆ ಶನಿವಾರ ನಡೆಯಿತು. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ. ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಸಂತಾಪ ಸೂಚಿಸಿದ್ದಾರೆ.