ಅರೆಕಾಲಿಕ ನೌಕರಿ ಬೇಕೆಂದು ಇವರ ಬಲೆಗೆ ಬಿದ್ದೀರಿ ಜೋಕೆ! ಯಾಮಾರಿದ್ರೆ ಕ್ಷಣಾರ್ಧದಲ್ಲೇ ಸಂಕಷ್ಟ ಎದುರಾಗುತ್ತೆ...

mobile
Published on

ಬೆಂಗಳೂರು: ಅರೆಕಾಲಿಕ ನೌಕರಿ ನೆಪದಲ್ಲಿ ಇಬ್ಬರು ಯುವಕರಿಗೆ ಆಮಿಷವೊಡ್ಡಿ ಅವರಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡಿ ವಂಚಿಸಿರುವ ಸಂಬಂಧ ವೈಟ್‌ಫೀಲ್ಡ್ ಸಿಇಎನ್ ಠಾಣೆಯಲ್ಲಿ ಎಪ್​ಐಆರ್ ದಾಖಲಾಗಿದೆ.

ವರ್ತೂರಿನ 23 ವರ್ಷದ ಯುವಕನ ಮೊಬೈಲ್‌ಗೆ ಲಿಂಕ್ ಒಳಗೊಂಡ ಸಂದೇಶ ಬಂದಿದೆ. ಅದರ ಮೇಲೆ ಕ್ಲಿಕ್ ಮಾಡಿದಾಗ ಅಪರಿಚಿತ ವ್ಯಕ್ತಿ, ವಾಟ್ಸ್‌ಆ್ಯಪ್‌ಗೆ ಸಂದೇಶ ಕಳುಹಿಸಿ ಅಮೆಜಾನ್ ಆ್ಯಪ್ ಡೌನ್‌ಲೋಡ್ ಲಿಂಕ್ ಸೆಂಡ್ ಮಾಡಿದ್ದ. ಜತೆಗೆ ಲಿಂಕ್‌ನಲ್ಲಿ ಲಾಗಿನ್ ಆಗಿ ನೋಂದಾಯಿಸಿಕೊಳ್ಳಿ. ಬಳಿಕ ಕೆಲವೊಂದು ಟಾಸ್ಕ್ ಕೊಡುತ್ತೇವೆ. ಅದನ್ನು ಪಾಸ್ ಮಾಡಿದರೆ ನಿಮಗೆ ಕಮಿಷನ್ ಬರಲಿದೆ. ಅದಕ್ಕೂ ಮೊದಲು ಹಣ ಪಾವತಿಸಬೇಕೆಂದು ಹೇಳಿ 1 ಲಕ್ಷ ರೂ.ವರ್ಗಾವಣೆ ಮಾಡಿಸಿಕೊಂಡಿದ್ದಾನೆ.

ಬಳಿಕ ಯುವಕನಿಗೆ ಅನೇಕ ಟಾಸ್ಕ್ ಕೊಟ್ಟಿದ್ದು, ಎಲ್ಲನ್ನೂ ಪಾಸ್ ಮಾಡಿದ ಮೇಲೂ ಯುವಕನಿಗೆ ಕಮಿಷನ್ ಹಣ ಬಂದಿಲ್ಲ. ಕರೆ ಮಾಡಿ ಕೇಳಲು ಮೊಬೈಲ್‌ಗೆ ಕರೆ ಮಾಡಿದಾಗ ಸಂಪರ್ಕಕ್ಕೆ ಸಿಕ್ಕಿಲ್ಲ.

ಇದೇ ರೀತಿ ವೈಟ್‌ಫೀಲ್ಡ್‌ನ ಇಮ್ಮಡಿಹಳ್ಳಿಯ 20 ವರ್ಷದ ಯುವಕನಿಗೆ ಆಮಿಷವೊಡ್ಡಿ ಅಮೇಜಾನ್ ಆ್ಯಪ್ ಡೌನ್‌ಲೋಡ್ ಮಾಡಿಸಿ ಅರೆಕಾಲಿಕ ನೌಕರಿ ಕೈತುಂಬ ವೇತನ ಎಂದು ಆಮಿಷ ಒಡ್ಡಿದ್ದಾರೆ. ಅದಕ್ಕೆ ಯುವಕ ಒಪ್ಪಿಕೊಂಡಾಗ ಆತನಿಂದಲೂ 1 ಲಕ್ಷ ರೂ. ಪಡೆದು ಮೋಸ ಮಾಡಿದ್ದಾರೆ. ಇದೇ ರೀತಿ ಹಲವರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net