

ಬೆಂಗಳೂರು: ಅಧಿವೇಶನದ ಹಿನ್ನೆಲೆ ವಿಧಾನಸೌಧಕ್ಕೆ ತರಾತುರಿಯಲ್ಲಿ ಪ್ರವೇಶಿಸುತ್ತಿದ್ದ ಶಾಸಕರೊಬ್ಬರು ಎಡವಿ ಬಿದ್ದ ಘಟನೆ ಸೋಮವಾರ ನಡೆದಿದೆ. ಅತ್ತ ಹಿಜಾಬ್ ಧರಿಸಿಯೇ ವಿಧಾನಸೌಧಕ್ಕೆ ಹೋಗುವೆ, ಧೈರ್ಯ ಇದ್ರೆ ನನ್ನನ್ನು ತಡೆಯಲಿ ಎಂದು ಸವಾಲು ಹಾಕಿದ್ದ ಕಾಂಗ್ರೆಸ್ ಶಾಸಕಿ ಖನೀಜ ಫಾತಿಮಾ, ಹಿಜಾಬ್ ಧರಿಸಿಯೇ ಕಲಾಪದಲ್ಲಿ ಪಾಲ್ಗೊಂಡರು.
ಗುರುಮಿಟ್ಕಲ್ ಕ್ಷೇತ್ರದ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರು ವಿಧಾನಸೌಧದ ಕೆಂಗಲ್ ಪ್ರವೇಶದ್ವಾರದ ಮೆಟ್ಟಿಲ ಮೇಲೆ ಎಡವಿ ಬಿದ್ದರು. ರಾಜ್ಯಪಾಲರ ಆಗಮನದ ನಂತರ ವಿಧಾನಸೌಧಕ್ಕೆ ತರಾತುರಿಯಲ್ಲಿ ಪ್ರವೇಶಿಸಿದ ಜೆಡಿಎಸ್ ಶಾಸಕ, ಮೆಟ್ಟಿಲ ಮೇಲೆ ಆಯ ತಪ್ಪಿ ಬಿದ್ದರು. ತಕ್ಷಣವೇ ಸಾವರಿಸಿಕೊಂಡು ವಿಧಾನಸೌಧ ಒಳಗೆ ತೆರಳಿದರು.
ಹಿಜಾಬ್ ಧರಿಸಿ ಕಲಾಪಕ್ಕೆ ಆಗಮಿಸಿದ ಶಾಸಕಿ: ಕಲಬುರಗಿ ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಖನೀಜ ಫಾತಿಮಾ ಎಂದಿನಂತೆ ಇಂದು(ಸೋಮವಾರ) ಹಿಜಾಬ್ ಧರಿಸಿ ವಿಧಾನಸೌಧಕ್ಕೆ ಆಗಮಿಸಿದರು.
ಶಾಲಾ-ಕಾಲೇಜುಗಳಿಗೆ ಹಿಜಾಬ್ ಧರಿಸಿ ಆಗಮಿಸುವುದು ದೊಡ್ಡ ಸುದ್ದಿಯಾಗಿರುವ ಸಂದರ್ಭದಲ್ಲಿ ಸದಾ ಹಿಜಾಬ್ ಧರಿಸಿಯೇ ಆಗಮಿಸುವ ಶಾಸಕಿ ಇಂದು ಸಹ ಅದೇ ರೀತಿ ಆಗಮಿಸುತ್ತಾರೆ ಎಂಬ ಕುತೂಹಲ ಮೂಡಿತ್ತು. ಶಾಲಾ-ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾಶ ಕೊಡಬೇಕು ಎಂದು ಕಲಬುರಗಿಯಲ್ಲಿ ಪ್ರತಿಬಟನೆ ನಡೆಸಿದ್ದ ಶಾಸಕಿ, ಹಿಜಾಬ್ ಧರಿಸಿಯೇ ವಿಧಾನಸೌಧಕ್ಕೆ ಹೋಗುವೆ. ನನ್ನನ್ನು ಅದ್ಯಾರು ತಡೀತಾರೋ ತಡೆಯಲಿ, ಧೈರ್ಯ ಇದ್ರೆ ತಡೆಯಲಿ ಎಂದು ಸವಾಲು ಹಾಕಿದ್ದರು. ಅದೇ ರೀತಿ ಇಂದು ಅಧಿವೇಶನಕ್ಕೆ ಹಿಜಾಬ್ ಧರಿಸಿಯೇ ಆಗಮಿಸಿ ಗಮನಸೆಳೆದರು.