ಸಚಿವ ಬೈರತಿ - ಸಂಸದ ಜಿಎಸ್​ಬಿ ಗುಸುಗುಸು ಮಾತಿಗೆ ಮಾಧುಸ್ವಾಮಿ ಮೊದಲ ಪ್ರತಿಕ್ರಿಯೆ ಹೀಗಿದೆ

jc madhuswamy
Published on

ತುಮಕೂರು: ಸುದ್ದಿಗೋಷ್ಠಿಯಲ್ಲೇ ಸಚಿವ ಬೈರತಿ ಬಸವರಾಜು ಮತ್ತು ಸಂಸದ ಜಿ.ಎಸ್.ಬಸವರಾಜು ಇಬ್ಬರೂ ಗುಸುಗುಸು ಮಾತಾಡಿದ ವಿಡಿಯೋ ವೈರಲ್​ ಆಗಿದ್ದು, ಸ್ವಪಕ್ಷದ ಸಚಿವ ಮಾಧುಸ್ವಾಮಿ ವಿರುದ್ಧ ಚಾಡಿ ಹೇಳುತ್ತಾ ಸಂಸದರು ಬೈದಿರುವುದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ಈ ಕುರಿತು ಸಚಿವ ಮಾಧುಸ್ವಾಮಿ 'ದಿಗ್ವಿಜಯ ನ್ಯೂಸ್​'ಗೆ ಮೊದಲ ಪ್ರತಿಕ್ರಿಯೆ ಕೊಟ್ಟದ್ದು ಹೀಗೆ...

'ಅವರ ಮನಸ್ಸಿನಲ್ಲಿ ನನ್ನ ಬಗ್ಗೆ ಏನಿದೆಯೋ ಗೊತ್ತಿಲ್ಲ. ಅವರು ಏನು ಬೇಕಾದರೂ ಮಾತಾಡಲಿ. ನನಗೇನೂ ತಾಪತ್ರಾಯ ಇಲ್ಲ. ಅವರು ಮಾತಾಡಿರೋದು ನನ್ನ ಗಮನಕ್ಕೆ ಬಂದಿಲ್ಲ. ಕುಲವನ್ನ ನಾಲಗೆ ಹೇಳುತ್ತೆ. ನನ್ನ ಮೇಲೆ ಅರಿಗೇಕೆ ಅಸಮಾಧಾನ ಎಂದು ನೀವು ಅವರನ್ನೇ ಕೇಳಿ. ಆ ಮನುಷ್ಯನ ಬಗ್ಗೆ ರಿಯಾಕ್ಟ್​ ಮಾಡೋಕೆ ಇಷ್ಟಾನೆ ಪಡಲ್ಲ. ಅವರು ಎಲ್ಲೆಲ್ಲಿ ಇದ್ದು ಬಂದ್ರು, ಯಾವ ಪಾರ್ಟಿಗಳು ಏನೇನಾಗಿದೆ? ಅವರು ಮುಖಕ್ಕೆ ಕನ್ನಡಿ ಹಿಡಿದು ನೋಡಿಕೊಳ್ಳಲಿ' ಎಂದು ಮಾಧುಸ್ವಾಮಿ ಹೇಳಿದ್ರು.

ಇಂದು 12 ಗಂಟೆಗೆ ಕ್ಯಾಬಿನೆಟ್​ ಮೀಟಿಂಗ್​ ಇದೆ. ನಾನು ಅವರಿಗೆ ಬೆಳಗ್ಗೇನೆ ಹೇಳಿದ್ದೆ, ಬೆಳಗ್ಗೆ 9.30ಕ್ಕೆ ತುಮಕೂರಿಂದ ಹೊರಡಬೇಕು. ಬೆಂಗಳೂರಲ್ಲಿ ಫ್ಲೈಓವರ್​ ಕ್ಲೋಸ್​ ಆಗಿದೆ. ಬೆಂಗಳೂರಿಗೆ ರೀಚ್​ ಆಗೋಕೆ 2 ತಾಸು ಬೇಕಿದೆ ಎಂದು. 10 ಗಂಟೆ ಆದ್ರೂ ಕಾರ್ಯಕ್ರಮ ಮುಗಿಸೋ ಲಕ್ಷಣ ಕಾಣಿಸಲಿಲ್ಲ. ಹಾಗಾಗಿ ನಾನು ಹೊರಟು ಬಂದೆ ಅಷ್ಟೆ. ಸಂಪುಟ ಸಭೆಗೆ ಸರಿಯಾದ ಸಮಯಕ್ಕೆ ಹಾಜರಾಗಲು ಬಂದಿದ್ದೇನೆ' ಎಂದು ಮಾಧುಸ್ವಾಮಿ ಹೇಳಿದರು.

ಅಷ್ಟು ಸುದ್ದಿಗೋಷ್ಠಿಯಲ್ಲಿ ಏನಾಯ್ತು?: ತುಮಕೂರು ನಗರದಲ್ಲಿ ವಿವಿಧ ಕಟ್ಟಡಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ಗುರುವಾರ ಸುದ್ದಿಗೋಷ್ಠಿಗೆ ಸಂಸದ ಜಿ.ಎಸ್.ಬಸವರಾಜು ಮತ್ತು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಆಗಮಿಸಿದ್ದರು. ಇಬ್ಬರೂ ಪಕ್ಕದಲ್ಲೇ ಕುಳಿತು ಕುಶಲೋಪರಿ ವಿಚಾರಿಸುತ್ತಾ ಗುಸುಗುಸು ಮಾತನಾಡಲು ಶುರು ಮಾಡಿದರು. ಆ ವೇಳೆ ಸಚಿವರ ಕಿವಿಯಲ್ಲಿ ಪಿಸುಗುಟ್ಟಿದ ಜಿಎಸ್​ಬಿ, 'ಈ ನನ್​ ಮಗ, ನಮ್​ ಮಂತ್ರಿ ಹೇಂಗೆ ಗೊತ್ತಾ? ದಕ್ಷಿಣ ಕೋರಿಯಾದ ಕಿಂಗ್ ಪಿನ್ ಇದಾನಲ್ಲ ಅವನಂತೆ. ಕೆಟ್ಟ ನನ್ಮಗ. ಇವನಿಂದ ಜಿಲ್ಲೆಯಲ್ಲಿ ಒಂದು ಸೀಟ್ ಬರೋಲ್ಲ... ಹಾಳು ಮಾಡಿಬಿಟ್ಟಿದ್ದಾನೆ ನಮ್ಮ ಜಿಲ್ಲೆಯನ್ನ...' ಎಂದು ಚಾಡಿ ಹೇಳುತ್ತಾ ಬೈಯ್ಯುತ್ತಲೇ ಇದ್ದರು. 'ಸುಮ್ಮನಿರು ಆಮೇಲೆ ಮಾತಾಡೋಣ' ಎಂದು ಬೈರತಿ ಹೇಳಿದರೂ ಸಂಸದರು ಮಾತ್ರ ಬೈಯ್ಯುತ್ತಲೇ ಇದ್ದರು.

'ಹಾಳು ಮಾಡಿಬಿಟ್ಟಿದ್ದಾನೆ ನಮ್ಮ ಜಿಲ್ಲೆಯನ್ನ. ಒಂದು ಸೀಟ್ ಬರಲ್ಲ. ಮಾತು ಎತ್ತಿದ್ರೆ ಹೊಡಿ, ಬಡಿ, ಕಡಿ ಅಂತಾನೆ. ಅವನ್ಯಾರೋ ಎಕ್ಸಿಕ್ಯೂಟಿವ್ ಇಂಜಿನಿಯರ್​​ಗೆ ಹೆಂಡ್ತಿ ಸೀರೆ ಹೊಗೆಯೋಕೆ ಲಾಯಕ್ ನೀನು ಅಂತ ಈ ಮಿನಿಸ್ಟರ್​ ಹೇಳ್ತಾನೆ. ಒಂದು ಹ್ಯಾಂಡ್ ಬಿಲ್ ಪ್ರಿಂಟ್ ಮಾಡಿಸಲ್ಲ. ಮೊನ್ನೆ ಸಾವಿರ ಕೋಟಿ ಡಿಕ್ಲೈರ್ ಮಾಡಿಕೊಂಡು ಬಂದವ್ನೆ. ನಮಗೆ ಯಾರಿಗೂ ಇನ್ವಿಟೇಶನ್ ಇಲ್ಲ, ಕರೆಯೋದು ಇಲ್ಲ' ಎಂದು ಸಚಿವ ಮಾಧುಸ್ವಾಮಿ ಅವರ ಹೆಸರೇಳದೆ ಸಂಸದರು ಚಾಡಿ ಹೇಳುತ್ತಿರುವ ದೃಶ್ಯ ಮಾಧ್ಯಗಳಲ್ಲಿ ರೆಕಾರ್ಡ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net