ಡಿಕೆಶಿಗೆ ಐಟಿ-ಇಡಿ ಲಿಂಕ್ ಜಾಸ್ತಿ... ಎನ್ನುತ್ತಲೇ ಜಮೀರ್ ಮನೆ ಮೇಲೆ ದಾಳಿಗೆ ಲಿಂಕ್​ ಕೊಟ್ಟ ಸಚಿವ!

dks jameer
Published on

ಮೈಸೂರು: ಚಾಮರಾಜಪೇಟೆ ಶಾಸಕ ಜಮೀರ್​ ಅಹ್ಮದ್​ ಅವರ ಮನೆ, ಪ್ಲ್ಯಾಟ್​, ಕಚೇರಿ, ಗೆಸ್ಟ್​ಹೌಸ್​ ಮೇಲೆ ಗುರುವಾರ ಇಡಿ(ಜಾರಿ ನಿರ್ದೇಶನಾಲಯ) ಅಧಿಕಾರಿಗಳು ದಾಳಿ ಮಾಡಿದ್ದು, ಮಹತ್ವದ ದಾಖಲೆಗಳನ್ನ ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಇತ್ತ ಈ ದಾಳಿ ಕುರಿತು ಮೈಸೂರಿನಲ್ಲಿ ಶುಕ್ರವಾರ ಸಚಿವ ಎಸ್​.ಟಿ. ಸೋಮಶೇಖರ್​ ಸ್ಫೋಟಕ ಹೇಳಿಕೆ ಕೊಟ್ಟಿದ್ದು, ಡಿಕೆಶಿಯತ್ತ ಕೈ ತೋರಿದ್ದಾರೆ.

ಸಿದ್ದರಾಮಯ್ಯ ಮುಂದಿನ ಸಿಎಂ ಎಂದು ಜಮೀರ್ ಅಹಮ್ಮದ್ ಪದೇಪದೆ ಹೇಳುತ್ತಿದ್ದರು. ಇದು ಡಿ.ಕೆ.ಶಿವಕುಮಾರ್‌ಗೆ ಅಜೀರ್ಣವಾಗಿರಬೇಕು. ಡಿಕೆಶಿಗೆ ಐಟಿ, ಇಡಿ ಲಿಂಕ್ ಜಾಸ್ತಿ ಇದೆ. ಹಾಗಾಗಿ ಅವರೇ ಏಕೆ ಜಮೀರ್ ಮನೆ ಮೇಲೆ ದಾಳಿ ಮಾಡಿಸಿರಬಾರದು? ಎಂದು ಸೋಮಶೇಖರ್​ ಹೇಳಿದ್ದಾರೆ.

ಬಿಜೆಪಿ ಇಂತಹ ದಾಳಿ ಮಾಡಿಸುತ್ತಿದೆ ಎಂದು ಕಾಂಗ್ರೆಸ್ ಹೇಳಿದ್ರೆ, ನಾವು ಡಿಕೆಶಿ ಮೇಲೆಯೇ ಹೀಗೆ ಬೆರಳು ಮಾಡಬಹುದಲ್ವಾ? ಐಟಿ ಮತ್ತು ಇಡಿ ಅವರು ತಮ್ಮ ಕೆಲಸ ಮಾಡುತ್ತಾರೆ. ವ್ಯವಹಾರಗಳು ಸರಿ ಇದ್ದಾಗ, ಯಾರೊಬ್ಬರೂ ಅದಕ್ಕೆ ಹೆದರುವ ಅಗತ್ಯವಿಲ್ಲ. ಐಟಿ, ಇಡಿ ಅಧಿಕಾರಿಗಳಿಗೆ ದಾಖಲೆ ಕೊಟ್ಟರೆ ಸಾಕು. ಆದರೆ ಇವರದ್ದನ್ನು ನೋಡಿದ್ರೆ ಏನೋ ವ್ಯವಹಾರ ಸರಿ ಇಲ್ಲ ಅನ್ನಿಸುತ್ತದೆ ಸೋಮಶೇಖರ್​ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net