

ಹುತ್ರಿದುರ್ಗ: ಕುಣಿಗಲ್ ತಾಲೂಕು ಇಪ್ಪಾಡಿ ಗ್ರಾಮ ಪಂಚಾಯಿತಿಯ 1 ಸ್ಥಾನಕ್ಕೆ ನಡೆದ ಉಪಚುನಾವಣೆಯ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿ ಐ.ಸಿ. ಮಹೇಶ್ 13 ಮತಗಳ ಅಂತರದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುರೇಶ್ ಬಾಬು ಅವರನ್ನ ಸೋಲಿಸಿದ್ದಾರೆ.
ಇಪ್ಪಾಡಿ ಗ್ರಾಮದ ಬ್ಲಾಕ್-1ರಿಂದ ಗ್ರಾಪಂಗೆ ಚುನಾಯಿತರಾಗಿದ್ದ ಕಾಂಗ್ರೆಸ್ ಬೆಂಬಲಿತ ಸದಸ್ಯ ಐ.ಜಿ.ರಮೇಶ್ ಕೆಲ ತಿಂಗಳ ಹಿಂದೆ ಬ್ಲ್ಯಾಕ್ ಫಂಗಸ್ನಿಂದ ಮೃತಪಟ್ಟಿದ್ದರು. ಇವರ ನಿಧನದಿಂದ ತೆರವಾಗಿದ್ದ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಗೆ ಬಿಜೆಪಿ ಬೆಂಬಲಿತ ಮಹೇಶ್, ಕಾಂಗ್ರೆಸ್ ಬೆಂಬಲಿತ ಸುರೇಶ್ ಬಾಬು, ಜೆಡಿಎಸ್ ಬೆಂಬಲಿತ ಸದಸ್ಯ ಶಿವಣ್ಣ ಸ್ಪರ್ಧಿಸಿದ್ದರು. ಮೂವರ ನಡುವೆ ತೀವ್ರ ಹಣಾಹಣಿ ನಡೆದಿತ್ತು. ಮತದಾರರಿಗೆ ಜಿದ್ದಾಜಿದ್ದಿಗೆ ಬಿದ್ದಂತೆ ಹಣ, ಬಿರಿಯಾನಿ, ಮದ್ಯ, ಸೀರೆ, ಕುಕ್ಕರ್ಗಳನ್ನು ಹಂಚಿದ್ದರು. ಶತಾಯಗತಾಯ ಆ ಸ್ಥಾನವನ್ನು ತಾವೇ ಉಳಿಸಿಕೊಳ್ಳಬೇಕೆಂದು ಕಾಂಗ್ರೆಸ್ ಮುಖಂಡರು ಇನ್ನಿಲ್ಲದ ಕಸರತ್ತು ನಡೆಸಿದ್ದರಾದರೂ, ಕಳೆದ ಬಾರಿ 516 ಮತ ಪಡೆದು ಐ.ಜಿ. ರಮೇಶ್ ಎದುರು ಪರಾಜಿತರಾಗಿದ್ದ ಮಹೇಶ್ಗೆ ಅನುಕಂಪದ ಅಲೆ ಒಲಿದಿದೆ. ಇಪ್ಪಾಡಿ ಬ್ಲಾಕ್-1ರಲ್ಲಿ ಒಟ್ಟು 1120 ಮತದಾರರಿದ್ದಾರೆ. ಈ ಪೈಕಿ ಡಿ.27ರಂದು ನಡೆದ ಉಪಚುನಾವಣೆಯಲ್ಲಿ 997 ಮತಗಳು ಚಲಾವಣೆ ಆಗಿತ್ತು. ಈ ಪೈಕಿ ಮಹೇಶ್-355 ಮತ, ಸುರೇಶ್ ಬಾಬು-342 ಮತ, ಶಿವಣ್ಣ-291 ಮತ ಪಡೆದಿದ್ದಾರೆ.
ಕಳಚಿತು ಕಾಂಗ್ರೆಸ್ ಭದ್ರಕೋಟೆ: ಇಪ್ಪಾಡಿಯನ್ನು ಕಾಂಗ್ರೆಸ್ ಬೆಲ್ಟ್ ಎಂದೇ ಈ ಹಿಂದೆ ಹೇಳಲಾಗುತ್ತಿತ್ತು. ಕಳೆದ ಬಾರಿ ಜಿಪಂ, ತಾಪಂ, ಗ್ರಾಪಂ ಎಲ್ಲವೂ ಕಾಂಗ್ರೆಸ್ ವಶದಲ್ಲಿತ್ತು. ಆದಾಗ್ಯೂ ಇಪ್ಪಾಡಿಯಲ್ಲಿ 2020ರ
ಡಿಸೆಂಬರ್ನಲ್ಲಿ ನಡೆದ ಗ್ರಾಪಂ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತರ ಆಯ್ಕೆ ಕಾಂಗ್ರೆಸ್ ನಾಯಕರಿಗೆ ಮಗ್ಗುಲ ಮುಳ್ಳಾಗಿದ್ದಂತೂ ಸುಳ್ಳಲ್ಲ. ಇಪ್ಪಾಡಿ ಬ್ಲಾಕ್-2 ರಲ್ಲಿ ಮೂರಕ್ಕೆ ಮೂರು ಸ್ಥಾನವೂ ಜೆಡಿಎಸ್ ಬೆಂಬಲಿತರ ಪಾಲಾಗಿತ್ತು. ಬ್ಲಾಕ್-1ರಲ್ಲಿ ಕಾಂಗ್ರೆಸ್ ವಿರುದ್ಧ ಬಂಡಾಯ ಎದ್ದು ಅಭ್ಯರ್ಥಿಯೊಬ್ಬರು ಸ್ಪರ್ಧಿಸಿದ್ದು, ಪಕ್ಷದ ಬೆಂಬಲಿತರ ಹಿನ್ನಡೆಗೂ ಕಾರಣವಾಯ್ತು. ಒಟ್ಟಾರೆ 13 ಸ್ಥಾನಗಳ ಪೈಕಿ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಬೆಂಬಲಿತ ಮೂವರು 3 ಆಯ್ಕೆಯಾಗಿದ್ದರು. ಈ ಪೈಕಿ ಇಬ್ಬರು ಜೆಡಿಎಸ್ಗೆ ಬೆಂಬಲ ಸೂಚಿಸಿದ್ದಾರೆ. ಉಳಿದಿದ್ದು ಒಂದು ಸ್ಥಾನ. ಐ.ಜಿ.ರಮೇಶ್ರ ನಿಧನದ ಬಳಿಕ ಈ ಸ್ಥಾನವೂ ಬಿಜೆಪಿ ಬೆಂಬಲಿತರ ಪಾಲಾಗಿದೆ. ಒಟ್ಟಾರೆ ಕಾಂಗ್ರೆಸ್ ಭದ್ರಕೋಟೆಯಂತಿದ್ದ ಇಪ್ಪಾಡಿಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಬೆಂಬಲಿತರೇ ಮೇಲುಗೈ ಸಾಧಿಸಿದ್ದಾರೆ.