

ಬೆಂಗಳೂರು: ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರ ಆವರಣದಲ್ಲಿ ವಿಶ್ವ ಯೋಗ ದಿನ ಆಚರಿಸಲಾಯಿತು. ಕೈದಿಗಳು, ಮತ್ತು ವಿಚಾರಣಾಧೀನ ಕೈದಿಗಳಿಗೆ ಆರ್ಟ್ ಆಫ್ ಲಿವಿಂಗ್, ಸತ್ಸಂಗ ಸಂಸ್ಥೆ ಮತ್ತು ಪ್ರಜಾಪಿತ ಬ್ರಹ್ಮಕುಮಾರಿ ಸಂಸ್ಥೆ ಸಹಯೋಗದಲ್ಲಿ ಯೋಗಾಭ್ಯಾಸ ಮಾಡಿಸಲಾಯಿತು.
ಸಂಸ್ಥೆಯ ಟವರ್-1 ವಿಭಾಗದಲ್ಲಿ ಆರ್ಟ್ ಆಫ್ ಲಿವಿಂಗ್ ಸಹಯೋಗದಲ್ಲಿ 500 ವಿಚಾರಣಾ ಬಂಧಿಗಳಿಗೆ, ಟವರ್ -2 ವಿಭಾಗದಲ್ಲಿ ಸತ್ಸಂಗ ಸಂಸ್ಥೆ ಸಹಯೋಗದಲ್ಲಿ 100 ಸಜಾ ಬಂಧಿಗಳಿಗೆ ಹಾಗೂ ಮಹಿಳಾ ವಿಭಾಗದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಸಂಸ್ಥೆಯ ಸಹಯೋಗದಲ್ಲಿ 100 ಮಹಿಳಾ ಬಂಧಿಗಳಿಗೆ ಯೋಗ ತರಬೇತಿ ನೀಡಲಾಯಿತು. ಕಾರಾಗೃಹದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಸಮ್ಯಕ್ ದೃಷ್ಟಿ, ಸಮ್ಯಕ್ ಸಂಕಲ್ಪ, ಸಮ್ಯಕ್ ವಾಕ್, ಸಮ್ಯಕ್ ಕರ್ಮ, ಸಮ್ಯಕ್ ಅಜೀವ, ಸಮ್ಯಕ್ ವ್ಯಾಯಾಮ, ಸಮ್ಯಕ್ ಸೃತಿ ಮತ್ತು ಸಮ್ಯಕ್ ಸಮಾಧಿ... ಈ ಎಂಟು ಯೋಗಗಳು ಅಂತರಂಗ-ಬಹಿರಂಗ ಶುದ್ಧಿಯ ಸಾಧನಗಳು. ಯೋಗದಿಂದ ಮನಸ್ಸು-ಶರೀರ, ಆಲೋಚನೆ -ಕ್ರಿಯೆ, ಸಂಯಮ- ಸಾರ್ಥಕತೆ, ಮಾನವ- ನಿಸರ್ಗದ ನಡುವೆ ಸಾಮರಸ್ಯ ಮತ್ತು ಆರೋಗ್ಯ ವೃದ್ಧಿಯಾಗುತ್ತೆ. ಸಮಗ್ರ ಮಾನವೀಯತೆಗಾಗಿ ದೈಹಿಕ, ಮಾನಸಿಕ, ಸಾಮಾಜಿಕ, ಭೌದ್ಧಿಕ ಸಾಮರಸ್ಯವೇ ಯೋಗ ಎಂಬ ಸಂದೇಶ ಸಾರಲಾಯಿತು.
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಸತತ 52 ವಾರಗಳಿಂದ ಕೈದಿಗಳಿಗೆ ಹಾಗೂ ಸಿಬ್ಬಂದಿ ವರ್ಗಕ್ಕೆ ಯೋಗಾಭ್ಯಾಸದ ತರಬೇತಿ ನೀಡುತ್ತಿರುವುದು ವಿಶೇಷ.