

ಮಂಡ್ಯ: ಐಟಿಐ ಕಾಲೇಜಿನ ಪ್ರಿನ್ಸಿಪಾಲ್ವೊಬ್ಬರಿಗೆ ಸಹೋದ್ಯೋಗಿಗಳ ಸಮ್ಮುಖದಲ್ಲೇ ಮಂಡ್ಯ ಕ್ಷೇತ್ರದ ಜೆಡಿಎಸ್ ಶಾಸಕ ಎಂ.ಶ್ರೀನಿವಾಸ್ ಕಪಾಳ ಮೋಕ್ಷ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಶಾಸಕರ ವರ್ತನೆಗೆ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿದೆ.
ಮಂಡ್ಯದ ಐಟಿಐ ಕಾಲೇಜಿನಲ್ಲಿ ಸೋಮವಾರ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ ಇತ್ತು. ಇಲ್ಲಿಗೆ ಶಾಸಕರು ಆಗಮಿಸಿದ್ದರು. ಈ ವೇಳೆ ಕಾಲೇಜಿನ ವ್ಯವಸ್ಥೆ ಬಗ್ಗೆ ಸರಿಯಾಗಿ ಮಾಹಿತಿ ನೀಡಿಲ್ಲ ಎಂದು ಪ್ರಿನ್ಸಿಪಾಲ್ ನಾಗನಂದ್ರ ವಿರುದ್ಧ ಗರಂ ಆದ ಶಾಸಕ ಶ್ರೀನಿವಾಸ್, ಎಲ್ಲರ ಎದುರೇ ಐದಾರು ಬಾರಿ ಕಪಾಳಕ್ಕೆ ಬಾರಿಸಲು ಯತ್ನಿಸಿದರಲ್ಲದೆ, 2 ಬಾರಿ ಹೊಡೆದಿದ್ದಾರೆ. ಹೆದರಿದ ಪ್ರಿನ್ಸಿಪಾಲರು, 'ಇರ್ಲಿ.. ಇರ್ಲಿ.. ಸರ್..' ಎನ್ನುತ್ತಾ ಸುಮ್ಮನೆ ನಿಲ್ಲುತ್ತಾರೆ. ಈ ದೃಶ್ಯ ವೈರಲ್ ಆಗಿದೆ.
ಕಾಲೇಜಿನಲ್ಲಿ ಸೂಕ್ತ ನಿರ್ವಹಣೆ ಇಲ್ಲವಾದಲ್ಲಿ ಅಥವಾ ತಪ್ಪು ಮಾಹಿತಿ ನೀಡಿದ್ದರೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು, ಅದನ್ನು ಬಿಟ್ಟು ಕಪಾಳಕ್ಕೆ ಹೊಡೆದದ್ದು ಎಷ್ಟು ಸರಿ? ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.