ಅ, ಆ ಬದಲು ಅಯ್ಯಾ, ಅಮ್ಮಾ..!

9-RNR-01A
Published on

ರಾಣೆಬೆನ್ನೂರ: ಆ ಮಕ್ಕಳು ಶಾಲೆಯಲ್ಲಿ ಆಟ-ಪಾಠ ಕಲಿಯುತ್ತ ನಲಿಯಬೇಕಿತ್ತು. ಆದರೆ, ಪಾಲಕರ ಒತ್ತಡಕ್ಕೆ ಮಣಿದು ಹೆಗಲಿಗೆ ಜೋಳಿಗೆ ಹಾಕಿಕೊಂಡು ಭಿಕ್ಷೆ ಬೇಡುತ್ತಿದ್ದಾರೆ.

ನಗರದ ಹೋಟೆಲ್, ಬಾರ್ ಆಂಡ್ ರೆಸ್ಟೋರೆಂಟ್ ಹಾಗೂ ತಾಲೂಕಿನ ಸುಕ್ಷೇತ್ರ ದೇವರಗುಡ್ಡ ಸೇರಿ ಪ್ರಮುಖ ದೇವಸ್ಥಾನಗಳ ಬಳಿ ಮಕ್ಕಳು ಭಿಕ್ಷಾಟನೆಗಿಳಿದಿದ್ದಾರೆ.

ಭಾರತ ಹುಣ್ಣಿಮೆ ನಿಮಿತ್ತ ತಾಲೂಕಿನ ದೇವರಗುಡ್ಡ, ಹೊನ್ನತ್ತಿ, ಸಮೀಪದ ಮೈಲಾರ ಸೇರಿ ಪ್ರಮುಖ ದೇವಸ್ಥಾನಗಳ ಜಾತ್ರೆ ನಡೆಯುತ್ತಿದ್ದು, ಜಿಲ್ಲೆ ಹಾಗೂ ರಾಜ್ಯದ ವಿವಿಧ ಭಾಗದಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡು ಕೆಲವರು ತಮ್ಮ ಮಕ್ಕಳನ್ನು ಭಿಕ್ಷೆ ಬೇಡಲು ಬಿಡುತ್ತಿದ್ದಾರೆ. ಇಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಿ, ಮಕ್ಕಳ ರಕ್ಷಣೆಗೆ ಮುಂದಾಗಬೇಕಾದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಕ್ಕಳ ರಕ್ಷಣೆ ಘಟಕ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇತ್ತ ತಿರುಗಿ ನೋಡುತ್ತಿಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಜನರಿಗೆ ಕಿರಿಕಿರಿ:

ಭಿಕ್ಷಾಟನೆ ಮಾಡುವ ಬಹುತೇಕ ಮಕ್ಕಳು 8ರಿಂದ 12 ವರ್ಷದೊಳಗಿನವರು. ಹಣ ಕೊಡದಿದ್ದರೆ ಹಿಂಬಾಲಿಸಿಕೊಂಡು ಹೋಗುತ್ತಾರೆ. ಇದರಿಂದಾಗಿ ಜನರಿಗೆ ಕಿರಿಕಿರಿಯಾಗುತ್ತಿದೆ. ಆದ್ದರಿಂದ ಅಧಿಕಾರಿಗಳು ಕೂಡಲೆ, ಸೂಕ್ತ ಕ್ರಮ ಕೈಗೊಂಡು ಭಿಕ್ಷಾಟನೆ ಮಾಡುತ್ತಿರುವ ಮಕ್ಕಳನ್ನು ವಸತಿಯುತ ಶಾಲೆಗೆ ಸೇರಿಸಬೇಕು ಎಂಬುದು ಜನರ ಆಗ್ರಹವಾಗಿದೆ.

ಮಕ್ಕಳ ಅಳಲು...

ನಮಗೂ ಶಾಲೆಗೆ ಹೋಗುವ ಮನಸಿದೆ. ಆದರೆ, ಭಿಕ್ಷೆ ಬೇಡಿ ಹಣ ತೆಗೆದುಕೊಂಡು ಮನೆಗೆ ಹೋಗದಿದ್ದರೆ ಊಟ ಹಾಕಲ್ಲ. ಹೊಡೆದು ಹೊರಗೆ ಕಳುಹಿಸುತ್ತಾರೆ. ಹಾಸ್ಟೆಲ್​ನಲ್ಲಿಟ್ಟು ಓದಿಸುವುದಾದರೆ ನಾವು ಹೋಗುತ್ತೇವೆ ಎಂದು ಭಿಕ್ಷಾಟನೆ ಮಾಡುತ್ತಿದ್ದ ಬಾಲಕನೊಬ್ಬ ‘ವಿಜಯವಾಣಿ’ ಎದುರು ಅಳಲು ತೋಡಿಕೊಂಡ.

ಮಕ್ಕಳು ತಲೆ ಮೇಲೆ ದೇವರ ಮೂರ್ತಿ ಹೊತ್ತು ಭಿಕ್ಷಾಟನೆ ಮಾಡುವುದನ್ನು ನೋಡಿದರೆ, ಕರುಳು ಕಿತ್ತು ಬರುತ್ತದೆ. ಇಂಥ ಮಕ್ಕಳನ್ನು ಕೂಡಲೆ ಶಾಲೆಗೆ ಸೇರಿಸುವ ಕೆಲಸ ಮಾಡಬೇಕು. ಅವರ ಪಾಲಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. | ಮಹೇಶಪ್ಪ ಹಾವನೂರ, ಸ್ಥಳೀಯ ನಿವಾಸಿ

ದೇವರಗುಡ್ಡ ಸೇರಿ ಯಾವ ಪ್ರದೇಶದಲ್ಲೂ ಮಕ್ಕಳನ್ನು ಭಿಕ್ಷಾಟನೆಗೆ ಬಿಡಬಾರದು. ಈ ಕುರಿತು ಕೂಡಲೆ, ಕಾರ್ಯಾಚರಣೆ ನಡೆಸಿ, ಭಿಕ್ಷಾಟನೆ ಮಾಡುತ್ತಿರುವ ಮಕ್ಕಳನ್ನು ಕರೆತಂದು ಶಾಲೆಗೆ ಸೇರಿಸುವ ವ್ಯವಸ್ಥೆ ಮಾಡಲಾಗುವುದು. ಮುಂದಿನ ದಿನದಲ್ಲಿ ಮಕ್ಕಳನ್ನು ಭಿಕ್ಷಾಟನೆಗೆ ಬಿಟ್ಟರೆ ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.| ಶಂಕರ ಜಿ.ಎಸ್., ತಹಸೀಲ್ದಾರ್ ರಾಣೆಬೆನ್ನೂರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net