

ಬೆಂಗಳೂರು: ಕೇಂದ್ರ ಹೆದ್ದಾರಿ ಪ್ರಾಧಿಕಾರದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸಿರುವ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಮಹತ್ವದ ಸಭೆ ನಡೆಸಿದರು.
ಧಾರಾಕಾರವಾಗಿ ಸುರಿದ ಮಳೆಯು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿ ಕಾಮಗಾರಿಯ ಹುಳುಕು ಬಯಲಾಗಿಸಿದೆ ಎಂಬ ದೂರಿನ ವಿಚಾರವು ಈ ಸಭೆಯಲ್ಲಿ ಪ್ರಧಾನವಾಗಿ ಚರ್ಚೆಯಾಗಿದೆ.
ಬೆಂಗಳೂರು- ಮೈಸೂರು ಹೆದ್ದಾರಿ ವಿಚಾರ ಕೂಡ ಚರ್ಚೆಗೆ ಬಂದಿತು. ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇ ಅವೈಜ್ಞಾನಿಕ ಎಂದು ಟೀಕಿಸುತ್ತಿರುವ ವಿಪಕ್ಷಗಳು, ಉದ್ಘಾಟನೆ ಹಂತದಲ್ಲಿರುವ ಎಕ್ಸ್‌ಪ್ರೆಸ್ ವೇನಲ್ಲಿ ಮಳೆಗೆ ಅನೇಕ ಕಡೆ ನೀರು ತುಂಬಿ ಅಸ್ತವ್ಯಸ್ತವಾಗಿತ್ತು ಈ ಹಿನ್ನೆಲೆಯಲ್ಲಿ ಹೆದ್ದಾರಿ ಬಗ್ಗೆ ಸಂಪೂರ್ಣವಾಗಿ ಚರ್ಚೆ ನಡೆಸಿದರು. ಇದೇ ವೇಳೆ ಶಿರಾಡಿ ಘಾಟ್ ಹೆದ್ದಾರಿ ಅಭಿವೃದ್ಧಿ ಸೇರಿದಂತೆ ರಾಜ್ಯದ ವಿವಿಧ ಹೆದ್ದಾರಿ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಲಾಯಿತು.
ಮುಂಬೈ, ಪುಣೆ, ಚೆನ್ನೈ, ಹೈದರಾಬಾದ್ ಸೇರಿ ವಿವಿಧ ನಗರಗಳಿಗೆ ಬೆಂಗಳೂರು ಸಂಪರ್ಕಿಸುವ ಹೆದ್ದಾರಿಯನ್ನು ಅಭಿವೃದ್ಧಿ ಮಾಡುವ ವಿಚಾರ ಕುರಿತು ಚರ್ಚೆಯಾಯಿತು ಎಂದು ಮೂಲಗಳು ತಿಳಿಸಿವೆ.
ಖಾಸಗಿ ತಾರಾ ಹೋಟೆಲ್ನಲ್ಲಿ ಗಡ್ಕರಿ ಜತೆ ನಡೆದ ಸಭೆಯಲ್ಲಿ ಸಾರಿಗೆ ಸಚಿವ ಶ್ರೀರಾಮುಲು, ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್, ಸಂಸದರಾದ ಪಿ.ಸಿ. ಮೋಹನ್, ತೇಜಸ್ವಿ ಸೂರ್ಯ ಭಾಗಿಯಾಗಿದ್ದರು.