

ಮೈಸೂರು: ಪ್ರೇಮಿಗಳ ದಿನವಾದ ಫೆಬ್ರವರಿ 14ರಂದೇ ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಅಂದು ಯಾವ ಪಕ್ಷದ ಮೇಲೆ ಲವ್ ಆಗುತ್ತೋ ಆ ಪಕ್ಷಕ್ಕೆ ಹೋಗುವೆ ಎಂದಿದ್ದ ಕಾಂಗ್ರೆಸ್ ಎಂಎಲ್ಸಿ ಸಿ.ಎಂ.ಇಬ್ರಾಹಿಂ ಇದೀಗ ಉಲ್ಟಾ ಹೊಡೆದಿದ್ದಾರೆ.
ಆಪ್ತರೊಂದಿಗೆ ಸಭೆ ನಡೆಸಲು ಭಾನುವಾರ ಹುಬ್ಬಳ್ಳಿಗೆ ಆಗಮಿಸಿದ್ದ ಇಬ್ರಾಹಿಂ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಸದ್ಯಕ್ಕೆ ಕಾಂಗ್ರೆಸ್ ತೊರೆಯುವುದಿಲ್ಲ. ಅಧಿವೇಶನ ಮುಗಿದ ಬಳಿಕ ನಿರ್ಧರಿಸುವೆ ಎಂದರು.
ನಾಳೆ(ಫೆ.14)ಯಿಂದ ರಾಜ್ಯ ವಿಧಾನಮಂಡಲ ಅಧಿವೇಶನ ನಡೆಯಲಿದೆ. ಈ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಮಂಡಿಸಲಿದೆ. ಇದಕ್ಕೆ ವಿಧಾನ ಪರಿಷತ್ನಲ್ಲಿ ಅಂಗೀಕಾರ ಪಡೆಯಬೇಕಾದರೆ ನನ್ನ ಮತ ನಿರ್ಣಾಯಕವಾಗಿದೆ. ಹೀಗಾಗಿ ಅಧಿವೇಶನ ಮುಗಿಯುವವರೆಗೆ ಕಾಂಗ್ರೆಸ್ ಪಕ್ಷ ತೊರೆಯುವುದಿಲ್ಲ ಎಂದು ಇಬ್ರಾಹಿಂ ಹೇಳಿದರು.
ಈ ವೇಳೆ ನಾನು ಕಾಂಗ್ರೆಸ್ ಪಕ್ಕೆ ರಾಜೀನಾಮೆ ಕೊಟ್ಟರೆ ಸರ್ಕಾರ ವಿಧಾನ ಪರಿಷತ್ನಲ್ಲಿ ಮತಾಂತರ ನಿಷೇಧ ಕಾಯ್ದೆ ಅಂಗೀಕಾರ ಪಡೆಯಲಿದೆ. ಇಬ್ರಾಹಿಂ ಬಿಜೆಪಿಯಿಂದ ಹಣ ಪಡೆದಿದ್ದಾರೆ ಎಂಬ ಆರೋಪಕ್ಕೆ ಗುರಿ ಆಗಬೇಕಾಗುತ್ತದೆ ಎಂದರು.
ಕಾಂಗ್ರೆಸ್ ಹೈಕಮಾಂಡ್ನಿಂದ ನನಗೆ ಬುಲಾವ್ ಬಂದಿದೆ ಎಂದು ಜಮೀರ್ ಅಹ್ಮದ್ ಹೇಳುತ್ತಿದ್ದಾರೆ. ಬುಲಾವ್ ಬಂದರೆ ಹೋಗಿ ಮಾತನಾಡುತ್ತೇನೆ. ಬಳಿಕ ನಮ್ಮ ಸಮಾಜದ ಮುಖಂಡರೊಂದಿಗೆ ಚರ್ಚೆ ನಡೆಸಿ ಮುಂದಿನ ನಿರ್ಣಯ ಕೈಗೊಳ್ಳುತ್ತೇನೆ. ಸದ್ಯಕ್ಕೆ ಕಾಂಗ್ರೆಸ್ಗೆ ರಾಜೀನಾಮೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.