ಪ್ರೇಮಿಗಳ ದಿನ ಕಾಂಗ್ರೆಸ್​ಗೆ ರಾಜೀನಾಮೆ ನೀಡುವೆ, ಅಂದು ಯಾವ ಪಕ್ಷದ ಮೇಲೆ ಲವ್​ ಆಗುತ್ತೋ ಆ ಪಕ್ಷಕ್ಕೆ ಹೋಗುವೆ: ಇಬ್ರಾಹಿಂ

C M Ibrahim
Published on

ಮೈಸೂರು: ಫೆಬ್ರವರಿ 14 ಪ್ರೇಮಿಗಳ ದಿನ. ಅಂದೇ ನಾನು ವಿಧಾನಪರಿಷತ್​ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಅಂದು ಯಾವ ಪಕ್ಷದ ಮೇಲೆ ಲವ್​ ಆಗುತ್ತೋ ಆ ಪಕ್ಷಕ್ಕೆ ಹೋಗುವೆ ಎಂದು ಕಾಂಗ್ರೆಸ್​ ಎಂಎಲ್​ಸಿ ಸಿ.ಎಂ.ಇಬ್ರಾಹಿಂ ಹೇಳಿದರು.

ಹೊಸ ಪಕ್ಷ ಕಟ್ಟುವುದಿಲ್ಲ, ಬೇರೆ ಪಕ್ಷ ಸೇರುತ್ತೇನೆ. ನನ್ನ ಮುಂದೆ ಜೆಡಿಎಸ್​, ತೃಣಮೂಲ ಕಾಂಗ್ರೆಸ್​, ಸಮಾಜವಾದಿ ಪಕ್ಷಗಳು ಇವೆ. ಜನರ ಅಭಿಪ್ರಾಯ ಪಡೆದು ಪಕ್ಷ ಆಯ್ಕೆ ಮಾಡುತ್ತೇನೆ. ರಾಜ್ಯದಲ್ಲಿ ಕಾಂಗ್ರೆಸ್​ ಅಧ್ಯಾಯ ಮುಗಿದು ಹೋಗಿದೆ. ಕಾಂಗ್ರೆಸ್​ ಅಧಿಕಾರಕ್ಕೆ ಬರುವುದು ಕನಸಿನ ಮಾತು ಎಂದು ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ನಾನು ಜೆಡಿಎಸ್​ ನಾಯಕರನ್ನು ಭೇಟಿ ಮಾಡಿರುವುದು ನಿಜ. ಒಂದು ವೇಳೆ ಜೆಡಿಎಸ್​ಗೆ ಸೇರ್ಪಡೆಯಾದರೆ ಏನು ಸ್ಥಾನಮಾನ ಸಿಗುತ್ತದೆ ಎಂಬುದು ಮುಖ್ಯವಲ್ಲ. ಸ್ಥಾನಕ್ಕಿಂತ ಮಾನ ಮುಖ್ಯವಾದದ್ದು. ಜೆಡಿಎಸ್​ ಸೇರ್ಪಡೆ ಕುರಿತು ಇನ್ನೂ ತೀರ್ಮಾನ ಕೈಗೊಂಡಿಲ್ಲ ಎಂದು ಸಿ.ಎಂ.ಇಬ್ರಾಹಿಂ ಹೇಳಿದರು.

ಸಾಬ್ರು ಕಾಂಗ್ರೆಸ್​ಗೆ ಬಿಟ್ಟರೆ ಬೇರೆಯವರಿಗೆ ಮತ ಹಾಕುವುದಿಲ್ಲ. ಬಿಜೆಪಿಗೆ ಮತ ಹಾಕಲು ಸಾಧ್ಯವೇ ಎಂಬ ಮನಸ್ಥಿತಿ ಕಾಂಗ್ರೆಸ್​ಗೆ ಇದೆ. ಅಲ್ಪಸಂಖ್ಯಾತರಿಗೆ ಮತ ಚಲಾಯಿಸಲು ಕಾಂಗ್ರೆಸ್​ ಬಿಟ್ಟು ಬೇರೆ ಪಕ್ಷ ಸಹ ಇದ್ದು, ಆ ಪಕ್ಷವನ್ನು ನಾವು ಫೆ.14ರೊಳಗೆ ಹುಡುಕಿಕೊಳ್ಳುತ್ತೇವೆ ಎಂದರು.

ಸಿದ್ದರಾಮಯ್ಯ ತವರು ಜಿಲ್ಲೆಯಿಂದ ಪ್ರವಾಸ ಪ್ರಾರಂಭ ಮಾಡಿದ್ದೇನೆ. ಇದು ಸಿದ್ದರಾಮಯ್ಯ ಅವರಿಗೆ ಟಾಂಗ್​ ನೀಡಲು ಪ್ರಾರಂಭಿಸಿದ ಪ್ರವಾಸವಲ್ಲ. ಟಾಂಗ್​ ನೀಡಲು ಸಿದ್ದರಾಮಯ್ಯ ಅಷ್ಟೊಂದು ದೊಡ್ಡವರಲ್ಲ. ನಾವು ಭಾರಿ ದೊಡ್ಡ ಟಾಂಗ್​. ಅವರು ಸಣ್ಣ ಟಾಂಗ್​. ನಮ್ಮ ಟಾಂಗ್​ ಅವರನ್ನು ತಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಹಾಸ್ಯಮಿಶ್ರಿತವಾಗಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net