

ಕನಕಪುರ : ನರೇಗಾ ಯೋಜನೆಯಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಈ ಯೋಜನೆಯಿಂದ ಯಾವುದೇ ಫಲಾನುಭವಿಗಳಿಗೆ ಸಮರ್ಪಕವಾದ ಸವಲತ್ತುಗಳು ಸಿಗುತ್ತಿಲ್ಲ ಆರೋಪಿಸಿ ತಾಲೂಕಿನ ಕೋಡಿಹಳ್ಳಿ ಹೋಬಳಿ ಹೇರಿಂದ್ಯಾಪನಹಳ್ಳಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಾಮಾಜಿಕ ಲೆಕ್ಕ ಪರಿಶೋಧನ ಸಭೆ ಹಾಗೂ ಮಹಿಳಾ ಮತ್ತು ಮಕ್ಕಳ ವಿಶೇಷ ಗ್ರಾಮ ಸಭೆಯಲ್ಲಿ ಗ್ರಾಮಸ್ಥರಾದ ಪ್ರಕಾಶ್, ಚಂದ್ರು ಸಮಸ್ಯೆಗಳ ಅನಾವರಣವನ್ನು ಅಧಿಕಾರಿಗಳ ಮುಂದೆ ತೆರೆದಿಟ್ಟರು.
ಶೌಚಗೃಹ ನಿರ್ಮಾಣದಲ್ಲಿ ಅಕ್ರಮ, ಜಲಜೀವನ್ ಮಿಷನ್ ಹಾಗೂ ನರೇಗಾ ಯೋಜನೆಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಅರ್ಹರನ್ನು ಕೈಬಿಟ್ಟು ತಮಗೆ ಬೇಕಾದ ಜಾಗದಲ್ಲಿ ಕಾಮಗಾರಿಗಳನ್ನು ಮಾಡದೇ ಹಣ ಡ್ರಾ ಮಾಡಲಾಗಿದೆ. ದನದ ಕೊಟ್ಟಿಗೆ ನಿರ್ಮಾಣಕ್ಕೆ ಸರ್ಕಾರದಿಂದ 45 ಸಾವಿರ ರೂ. ನಿಗದಿಯಾಗಿದ್ದರೆ ಪಂಚಾಯಿತಿಯಲ್ಲಿ ಕೇವಲ 15 ಸಾವಿರ ರೂ. ಕೊಟ್ಟು ಕೈತೊಳೆದುಕೊಳ್ಳುತ್ತಿದ್ದಾರೆ. ಗ್ರಾಮದ ಸರ್ವೇ ನಂ. 52ರಲ್ಲಿ ವಿಳ್ಯೆದೆಲೆ ತೋಟಕ್ಕೆ ನರೇಗಾ ಯೋಜನೆ ನೀಡಿದ್ದಾರೆ. ಅಲ್ಲಿ ಯಾವುದೇ ಪಂಪ್‌ಸೆಟ್, ಬೆಳೆ ಬೆಳೆಯದಿದ್ದರೂ ಹಣ ಡ್ರಾ ಮಾಡಲಾಗಿದೆ ಎಂದು ಆರೋಪಿಸಿದರು.
ಗುಳಗನಹಳ್ಳಿ ಗ್ರಾಮಸ್ಥ ಚನ್ನಪ್ಪ ಮಾತನಾಡಿ, ಶೌಚಗೃಹ ನಿರ್ಮಾಣದಲ್ಲಿ ಭಾರಿ ಅಕ್ರಮವಾಗಿದೆ, ಕೊಟ್ಟಿಗೆ ನಿರ್ಮಿಸಿ ಒಂದು ವರ್ಷ ಕಳೆದರೂ ಹಣ ಬಿಡುಗಡೆಯಾಗಿಲ್ಲ, ಕೂಡಲೇ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿರುವ ನರೇಗಾ ಯೋಜನೆಯ ದುರುಪಯೋಗ ಮತ್ತು ಅಕ್ರಮದ ಬಗ್ಗೆ ಗ್ರಾಮಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಬೇಕೆಂದು ಒತ್ತಾಯಿಸಿದರು. ಸಾಮಾಜಿಕ ಲೆಕ್ಕ ಪರಿಶೋಧನ ಸಂಯೋಜಕಿ ಕಮಲಮ್ಮ ನರೇಗಾ ವರದಿ ಮಂಡಿಸಿ, ಯೋಜನೆಯ ಸದ್ಬಳಕೆಯ ಬಗ್ಗೆ ಮಾಹಿತಿ ನೀಡಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವರಾಜು ಮಾತನಾಡಿ, ಲೋಪದೋಷವಿರುವ ಕಾಮಗಾರಿಗಳನ್ನು ಪರಿಶೀಲಿಸಿ ಒಂದು ತಿಂಗಳಲ್ಲಿ ಸರಿಪಡಿಸುವುದಾಗಿ ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಭೈರವಮೂರ್ತಿ, ಉಪಾಧ್ಯಕ್ಷ ಜಯರತ್ನ, ಮಾಜಿ ಉಪಾಧ್ಯಕ್ಷ ರಾಜೇಗೌಡ, ಸದಸ್ಯರಾದ ನರಸಿಂಹಮೂರ್ತಿ, ಸನತ್‌ಕುಮಾರ್, ಸಾವಿತ್ರಮ್ಮ, ಶಂಭುಲಿಂಗಯ್ಯ, ಹಿಂದುಳಿದ ವರ್ಗಗಳ ಅಧಿಕಾರಿ ಲೋಕೇಶ್ವರಿ, ರೇಷ್ಮೆ ಇಲಾಖೆ ಅಧಿಕಾರಿ ಮಂಜುನಾಥ್, ತೋಟಗಾರಿಕೆ ಇಲಾಖೆ ಅಧಿಕಾರಿ ಅನಿಲ್, ನರೇಗಾ ಇಂಜಿನಿಯರ್ ಪ್ರಶಾಂತ್, ಸ್ತ್ರೀಶಕ್ತಿ ಸಂಘದ ಸದಸ್ಯರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಭಾಗವಹಿಸಿದ್ದರು.
ಅರಣ್ಯ ಇಲಾಖೆ ಕೈಗೊಳ್ಳಲಿ
ರೇಷ್ಮೆ ಇಲಾಖೆಯಲ್ಲಿ 16 ಲಕ್ಷ ರೂ. ವೆಚ್ಚದಲ್ಲಿ 49 ಕಾಮಗಾರಿಗಳು, ಕೃಷಿ ಇಲಾಖೆಯಲ್ಲಿ 28 ಲಕ್ಷದಲ್ಲಿ 1 ಕಾಮಗಾರಿ, ಅರಣ್ಯ ಇಲಾಖೆಯಲ್ಲಿ 16 ಲಕ್ಷ ರೂ. ವೆಚ್ಚದಲ್ಲಿ 21 ಕಾಮಗಾರಿಗಳು ನಡೆದಿವೆ. ಸಸಿ ನೆಡುವ ಯೋಜನೆಯಲ್ಲಿ ಸಸಿಗಳೇ ಅಲ್ಲಿ ಕಾಣುತ್ತಿಲ್ಲ, ಅರಣ್ಯ ಇಲಾಖೆ ಕೂಡಲೇ ಇದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಒಟ್ಟು 31 ಕಾಮಗಾರಿಗಳಿಗೆ ಭಾವಚಿತ್ರ ಅಳವಡಿಸಿಲ್ಲ, 42 ಕಾಮಗಾರಿಗಳಿಗೆ ಎಂ.ಬಿ ಬರೆಯದೆ ಹಣ ಬಿಡುಗಡೆಗೊಳಸಾಗಿದೆ. 60ಕ್ಕೂ ಹೆಚ್ಚು ಕಾಮಗಾರಿಗಳಲ್ಲಿ ನಾಮಫಲಕಗಳ ಪ್ರದರ್ಶನವಿಲ್ಲ, ವಸತಿ ಇಲಾಖೆಯಲ್ಲೂ ಇಂತಹ ಪ್ರಕರಣಗಳಿಗೆ ಹಣ ಬಿಡುಗಡೆ ಮಾಡಲಾಗಿದೆ. ಕಂದಕ ಬದು, ದನದಕೊಟ್ಟಿಗೆಗಳು, 4 ಕಾಮಗಾರಿಗಳು ನಾಶವಾಗಿವೆ. ಕೂಡಲೇ ಇವುಗಳನ್ನು ಮರುನಿರ್ಮಾಣ ಮಾಡುವುದು, ಇಲ್ಲವಾದಲ್ಲಿ ಅದರ ಹಣವನ್ನು ವಾಪಸ್ ಕಟ್ಟಿಸಬೇಕೆಂದು ಸಾಮಾಜಿಕ ಲೆಕ್ಕ ಪರಿಶೋಧನ ಸಂಯೋಜಕಿ ಕಮಲಮ್ಮ ಪಿಡಿಒಗೆ ಸೂಚನೆ ನೀಡಲು ಆದೇಶಿಸಿದರು.