

ಹೊಳೆನರಸೀಪುರ: ಪಟ್ಟಣದಲ್ಲಿ ನಡೆಯುತ್ತಿರುವ 66ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮದ ಅಂಗವಾಗಿ ಅ.2 ರಂದು ಮಹಾಗಣಪತಿ ಹೋಮ ಹಾಗೂ ಬೃಹತ್ ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇದರ ಅಂಗವಾಗಿ ಕಾರ್ಯಾಧ್ಯಕ್ಷ ಟಿ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಗುರುವಾರ ಪೂರ್ವಭಾವಿ ಸಭೆ ನಡೆಯಿತು.
ಸಭೆಯಲ್ಲಿ ಚರ್ಚಿಸಿದ ಸಮಿತಿಯ ಸದಸ್ಯರು ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ 15 ರಿಂದ 17 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದ್ದು ಇಷ್ಟು ಜನರ ಊಟಕ್ಕಾಗಿ ಮಾಡಿಕೊಳ್ಳಬೇಕಾದ ಸಿದ್ಧತೆ ಬಗ್ಗೆ ಚರ್ಚಿಸಿದರು. ಊಟ ತಯಾರಿಕೆಯ ಜವಾಬ್ದಾರಿಯನ್ನು ಬಾಣಸಿಗ ಸತೀಶ್ ಅವರಿಗೆ ನೀಡಲು ಸಭೆ ನಿರ್ಧರಿಸಿತು.
ಅನ್ನಸಂತರ್ಪಣೆಗಾಗಿ ದವಸ, ಧಾನ್ಯ, ಅಕ್ಕಿ, ತರಕಾರಿ, ತೆಂಗಿನಕಾಯಿ ಸಂಗ್ರಹಿಸಲು ಪಟ್ಟಣದಲ್ಲಿ ಶುಕ್ರವಾರ, ಶನಿವಾರ ಮತ್ತು ಭಾನುವಾರ ಹೊರೆ ಕಾಣಿಕೆ ರಥವನ್ನು ಕಳುಹಿಸಲು ನಿರ್ಧರಿಸಿದರು. ಅನ್ನ ಸಂತರ್ಪಣೆಗೆ ಬೇಕಾದ ಹಾಲು, ಮೊಸರು, ಶಾಮಿಯಾನ, ಟೇಬಲ್, ಪಾತ್ರೆಗಳನ್ನು ಹಾಗೂ ಗಣಪತಿ ಹೋಮದ ವ್ಯವಸ್ಥೆಯನ್ನು ಕಳೆದ ವರ್ಷದಂತೆ ಈ ವರ್ಷವೂ ಶಾಸಕ ಎಚ್.ಡಿ. ರೇವಣ್ಣ ಒದಗಿಸಲಿದ್ದಾರೆ ಎಂದು ಸೇವಾ ಸಮಿತಿಯ ಅಧ್ಯಕ್ಷ ಎಚ್.ಎಸ್. ಪುಟ್ಟಸೋಮಪ್ಪ ಸಭೆಗೆ ತಿಳಿಸಿದರು. ಸಮಿತಿಯ ಎಲ್ಲ ಸದಸ್ಯರು ಪಟ್ಟಣದಲ್ಲಿನ ಸಂಘ ಸಂಸ್ಥೆಗಳ ಸಹಾಯ ಪಡೆದು ಆ ದಿನ ಊಟ ಬಡಿಸಲು ಬಾಣಸಿಗರಿಗೆ ಸಹಕಾರ ನೀಡಲು ನಿರ್ಧರಿಸಿದರು. ಪ್ರಸಾದಕ್ಕೆ ಬೇಕಾದಷ್ಟು ಅಕ್ಕಿಯನ್ನು ತಾಲೂಕಿನಲ್ಲಿನ ರೈಸ್‌ಮಿಲ್ ಮಾಲೀಕರು ಒದಗಿಸಲಿದ್ದಾರೆ ಎಂದು ಸ್ವತಃ ರೈಸ್‌ಮಿಲ್ ಮಾಲೀಕರಾಗಿರುವ ಸಮಿತಿಯ ಸದಸ್ಯರಾದ ಎಚ್.ಎಸ್. ಸುದರ್ಶನ್ ಹಾಗೂ ಶಿವಣ್ಣ ವಿವರಿಸಿದರು.
ಕಾರ್ಯಾಧ್ಯಕ್ಷ ಟಿ. ಶಿವಕುಮಾರ್, ಅಧ್ಯಕ ಎಚ್.ಎಸ್. ಪುಟ್ಟಸೋಮಪ್ಪ, ಕಾರ್ಯದರ್ಶಿ ವೈ.ವಿ.ಚಂದ್ರಶೇಖರ್, ಖಜಾಂಚಿ ಎಸ್. ಗೋಕುಲ್, ಎಚ್.ವಿ. ಸುರೇಶ್ ಕುಮಾರ್, ಎಚ್.ಎಸ್. ಸುದರ್ಶನ್, ಎ. ಜಗನ್ನಾಥ್, ಎ.ಆರ್. ರವಿಕುಮಾರ್, ಕೆ.ಶ್ರೀಧರ್, ದೊಡ್ಡಮಲ್ಲೇಗೌಡ, ಸೈಕಲ್‌ಶಾಪ್ ಜಗದೀಶ್, ಮುರಳೀಧರ್ ಗುಪ್ತಾ, ಪ್ರಸಾದ ವ್ಯವಸ್ಥೆಯ ಮೇಲ್ವಿಚಾರಕ ಶಿವಕುಮಾರ್, ಸ್ಟುಡಿಯೋ ಶಂಕರ್, ಅಶೋಕ್, ಗುರುರಾಜ್, ನರಸಿಂಹಶೆಟ್ಟಿ. ಶಂಕರ್‌ನಾರಾಯಣ್ ಐತಾಳ್, ವನಜಾಕ್ಷಿ, ಮಂಜುನಾಥ್, ನಿವೃತ್ತ ಯೋಧ ಈಶ್ವರ್, ಗೋವಿಂದ ಕಾದಲನ್ ಕೃಷ್ಣ, ಅಯ್ಯಪ್ಪ ಮಹದೇವ, ಎಲೆಕ್ಟ್ರಿಕ್‌ಲೋಕಿ ಇತರರಿದ್ದರು.