

ಗೋಣಿಕೊಪ್ಪ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಶಕ್ತಿಯೇ ನಿಜವಾದ ಅಧಿಕಾರ. ಅಂತಹ ಜನತೆಗೋಸ್ಕರ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ವಿರಾಜಪೇಟೆ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಕಾರ್ಯಕರ್ತರಿಗೆ ಕರೆ ನೀಡಿದರು.
ಕುಟ್ಟ ನಗರದ ಕೊಡವ ಸಮಾಜ ಸಭಾಂಗಣದಲ್ಲಿ ಶ್ರೀಮಂಗಲ ಹಾಗೂ ಕುಟ್ಟ ವಲಯ ಕಾಂಗ್ರೆಸ್ ವತಿಯಿಂದ ಮಂಗಳವಾರ ಆಯೋಜಿಸಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಚುನಾವಣಾ ಸಂದರ್ಭದಲ್ಲಿ ಕೊಟ್ಟ ಮಾತಿನಂತೆ ನಿಮ್ಮವನಾಗಿ, ನಿಮ್ಮ ಮನೆ ಬಾಗಿಲಿಗೆ ಬಂದು ನಿಮ್ಮ ಸೇವೆ ಮಾಡುತ್ತೇನೆ. ಆ ಮಾತಿಗೆ ಇಂದು ಕೂಡ ನಾನು ಕಟಿಬದ್ಧವಾಗಿದ್ದೇನೆ ಎಂದರು.
ಕಾರ್ಯಕರ್ತರು ಶಕ್ತಿ ಮೀರಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದೀರಿ. ಇದು ಕಾರ್ಯಕರ್ತರ ಶ್ರಮದ ಫಲ. ಈ ಗೆಲುವು ಕಾರ್ಯಕರ್ತರ ಗೆಲುವಾಗಿದೆ. ಕ್ಷೇತ್ರ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಕಾಡುತ್ತಿದೆ. ಗ್ರಾಮೀಣ ಭಾಗದಲ್ಲಿ ಬಸ್ಸಿನ ವ್ಯವಸ್ಥೆ ಸಮರ್ಪಕವಾಗಿಲ್ಲ. ಕುಟ್ಟದಲ್ಲಿರುವ ಆಸ್ಪತ್ರೆಯ ವ್ಯವಸ್ಥೆ ಬದಲಾವಣೆಗೆ ಕ್ರಮ ಕೈಗೊಂಡಿದ್ದೇನೆ. ಗ್ರಾಮೀಣ ಭಾಗಕ್ಕೆ ಸರ್ಕಾರಿ ಬಸ್ ನೀಡಲು ಸಚಿವರಿಗೆ ಪತ್ರ ಬರೆದಿದ್ದು, 20 ಬಸ್‌ಗಳನ್ನು ಮಂಜೂರು ಮಾಡಿದ್ದಾರೆ. ಖಾಸಗಿ ಸಹಭಾಗಿತ್ವದೊಂದಿಗೆ ಆಸ್ಪತ್ರೆಗಳನ್ನು ಉನ್ನತೀಕರಣಗೊಳ್ಳಲು ಕ್ರಮ ಕೈಗೊಳ್ಳಲಾಗುವುದು. ಕುಟ್ಟ ಪಟ್ಟಣದ ರಸ್ತೆಯು ತೀರ ಹದಗೆಟ್ಟಿದ್ದು, ಇದರ ದುರಸ್ತಿಗೆ ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದರು.
ಮುಂದಿನ ಲೋಕಸಭಾ ಚುನಾವಣೆಯು ನಮಗೆ ಸವಾಲಾಗಿದೆ. ಈ ಸವಾಲನ್ನು ನಾವು ಯಶಸ್ವಿಯಾಗಿ ಮುನ್ನಡೆಸುವ ಜವಾಬ್ದಾರಿ ಪಕ್ಷದ ಕಾರ್ಯಕರ್ತರ ಮೇಲಿದೆ ಎಂದರು.
ಮುಖಂಡ ಮುಕ್ಕಾಟೀರ ಶಿವು ಮಾದಪ್ಪ ಪ್ರಸ್ತಾವಿಕವಾಗಿ ಮಾತನಾಡಿ, ಈ ಭಾಗದ ಆನೆ, ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಈ ಭಾಗದ ಕಾರ್ಮಿಕರ ಸಮಸ್ಯೆಗೆ ಪರಿಹಾರ ಹುಡುಕಲು ಶಾಸಕರು ಮುಂದಾಗಬೇಕೆಂದರು.
ಕುಟ್ಟ ವಲಯ ಕಾಂಗ್ರೆಸ್ ಅಧ್ಯಕ್ಷ ಎಚ್.ವೈ.ರಾಮಕೃಷ್ಣ ಮಾತನಾಡಿ, ಈ ಭಾಗದಲ್ಲಿ ಸರ್ಕಾರಿ ಆಸ್ಪತ್ರೆ ಇದ್ದರೂ ಜನರ ಸೇವೆಗೆ ಅಷ್ಟಾಗಿ ಸ್ಪಂದಿಸುತ್ತಿಲ್ಲ. ಇದರಿಂದ ಸಮಸ್ಯೆ ಉಲ್ಬಣವಾಗಿದೆ. ಕಾರ್ಮಿಕರ ಕಷ್ಟಕ್ಕೆ ಸ್ಪಂದನೆ ಆಗಬೇಕಾಗಿದೆ ಎಂದು ಶಾಸಕರಿಗೆ ಮನವಿ ಸಲ್ಲಿಸಿದರು.
ಕೊಡಗು ಜಿಲ್ಲಾ ಕಾಂಗ್ರೆಸ್‌ನ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ಎರಡು ದಶಕಗಳಿಂದ ಕಾಂಗ್ರೆಸ್ ಶಾಸಕರಿಲ್ಲದೆ ಕಾರ್ಯಕರ್ತರು ಸಮಸ್ಯೆ ಎದುರಿಸುತ್ತಿದ್ದರು. ಇದೀಗ ಕಾರ್ಯಕರ್ತರ ನೋವಿಗೆ ಸ್ಪಂದನೆ ಲಭಿಸಿದೆ. ಕಾರ್ಯಕರ್ತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು. ಮುಂದಿನ ಚುನಾವಣೆಯನ್ನು ಗಂಭೀರವಾಗಿ ಎದುರಿಸುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ. ಪಕ್ಷ ನೀಡುವ ಜವಾಬ್ದಾರಿಯನ್ನು ನಿಭಾಯಿಸುವಂತೆ ಕರೆ ನೀಡಿದರು.
ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪಲ್ವಿನ್ ಪೂಣಚ್ಚ, ಫೆಡರೇಷನ್ ಆಫ್ ಕೊಡವ ಸಮಾಜ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ನಾಮೇರ ಅಂಕಿತ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹನೀಫ್, ಬೀರಾಲಿ, ವಿನುವರ್ಗಿಸ್, ವಿ.ಕೆ.ಗೋಪಾಲ ಕೃಷ್ಣ, ಟಿ.ಎಂ.ಅಶ್ರಫ್, ಗಂಗಾಧರ, ಟಿ.ಸುರೇಶ್, ವಿಜಯನ್, ಶಂಕರ್, ವಿಷ್ಣು, ಮುತ್ತಯ್ಯ, ಪಳನಿವೇಲು ಇತರರು ಇದ್ದರು.