ಚಂದ್ರಶೇಖರ ಗುರೂಜಿ ಹತ್ಯೆಯಾದ ಹೋಟೆಲ್​ನಲ್ಲಿ ಹೋಮ-ಹವನ! ದೇವರ ಮೊರೆ ಹೋದ ಸಿಬ್ಬಂದಿ

chandrashekhar guruji
Published on

ಹುಬ್ಬಳ್ಳಿ: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಉಣಕಲ್ ಕೆರೆ ಬಳಿಯ ದಿ ಪ್ರೆಸಿಡೆಂಟ್ ಹೋಟೆಲ್​ನಲ್ಲಿ ಭಕ್ತರ ಸೋಗಲ್ಲಿ ಬಂದ ಸರಳ ವಾಸ್ತು ಸಂಸ್ಥೆಯ ಮಾಜಿ ಉದ್ಯೋಗಿಗಳಿಬ್ಬರು ಚಂದ್ರಶೇಖರ ಗುರೂಜಿ ಅವರ ಕಾಲಿಗೆ ಬಿದ್ದು ನಮಸ್ಕರಿಸುಂತೆ ನಟಿಸಿ ನೋಡ ನೋಡುತ್ತಿದ್ದಂತೆ ಚಾಕುವಿನಿಂದ 43 ಬಾರಿ ಚುಚ್ಚಿ ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು. ಸಿಸಿಟಿವಿಯಲ್ಲಿ ಸೆರೆಯಾದ ಭಯಾನಕ ದೃಶ್ಯ ನೋಡಿದ ಜನ ಬೆಚ್ಚಿಬಿದ್ದಿದ್ದಾರೆ. ಕೊಲೆ ನಡೆದ ದಿನವೇ ಆರೋಪಿಗಳನ್ನು ಬಂಧಿಸಿರುವ ಪೊಲೀಸರ ತನಿಖೆ ಮುಂದುವರಿಸಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆ ನಡುವೆ ಹೋಟೆಲ್ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ದೇವರ ಮೊರೆ ಹೋಗಿದ್ದಾರೆ.

ಚಂದ್ರಶೇಖರ್​ ಗುರೂಜಿ ಹತ್ಯೆ ನಡೆದ ಸ್ಥಳದಲ್ಲೇ ಹೋಮ-ಹವನ ನಡೆಸಲಾಗಿದೆ. ಗುರೂಜಿ ಹತ್ಯೆಯಿಂದ ಹೋಟೆಲ್​ನಲ್ಲಿ ಆತಂಕ ನಿರ್ಮಾಣವಾಗಿತ್ತು. ಭಯ ದೂರ ಮಾಡಲು ಮತ್ತು ಹೋಟೆಲ್ ಶುದ್ಧಗೊಳಿಸಲು ಇಬ್ಬರು ಪುರೋಹಿತರಿಂದ ಸುದರ್ಶನ ಹೋಮ ಮಾಡಿಸಲಾಗಿದೆ.

ಜು.5ರಂದು ಚಂದ್ರಶೇಖರ ಗುರೂಜಿ ಮೃತಪಟ್ಟಿದ್ದರು. 6ರಂದು ಸಂಜೆ ಕುಟುಂಬಸ್ಥರು ಮತ್ತು ಭಕ್ತರ ಆಕ್ರಂದನದ ನಡುವೆಯೇ ಹುಬ್ಬಳ್ಳಿಯ ಸುಳ್ಳ ರಸ್ತೆಯಲ್ಲಿರುವ ಗುರೂಜಿ ಅವರ ಹೊಲದಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net