

ಬೆಂಗಳೂರು: ಇಂದಿರಾನಗರದಲ್ಲಿ ಬೀದಿನಾಯಿ ಮೇಲೆ ಕಾರು ಹತ್ತಿಸಿದ್ದು, ನಾಯಿಯನ್ನು ಕೊಂದ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಜಕ್ಕೂರು ನಿವಾಸಿ, ಖಾಸಗಿ ಕಂಪನಿ ಕ್ಯಾಬ್ ಚಾಲಕ ಅಮುಲ್ ರಾಜ್ ಬಂಧಿತ. ಜುಲೈ 5ರ ಸಂಜೆ 6 ಗಂಟೆ ಸುಮಾರಿನಲ್ಲಿ ಇಂದಿರಾನಗರ 2ನೇ ಹಂತದಲ್ಲಿ ಕೆ.ಜಿ.ರಸ್ತೆಯ "ಬ್ರೋನಿ' ಹೆಸರಿನ ಬೀದಿನಾಯಿ ಮೇಲೆ ಅಮುಲ್ ರಾಜ್ ಕಾರು ಹರಿಸಿದ್ದ. ಗಂಭೀರ ಗಾಯಗೊಂಡಿದ್ದ ಬ್ರೋನಿ ಸ್ಥಳದಲ್ಲೇ ಮೃತಪಟ್ಟಿತ್ತು. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಬಗ್ಗೆ ಇಂದಿರಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದ, ಸ್ಥಳೀಯ ನಿವಾಸಿ ಸ್ನೇಹ ನಂದಿಹಾಳ್, ನಾವು ಬೀದಿನಾಯಿಗೆ ಬ್ರೋನಿ ಎಂಬ ಹೆಸರಿಟ್ಟು ಸಾಕಿದ್ದೆವು. ಈ ಬ್ರೋನಿ ಮೇಲೆ KA 01, MS 8525 ನಂಬರಿನ ಕಾರನ್ನು ಚಾಲಕ ಉದ್ದೇಶ ಪೂರ್ವಕವಾಗಿಯೇ ಹತ್ತಿಸಿ ನಮ್ಮ ಬ್ರೋನಿಯನ್ನು ಕೊಂದಿದ್ದಾನೆ ಎಂದು ಆರೋಪಿಸಿ ಸಿಸಿಟಿವಿ ದೃಶ್ಯಾವಳಿ ಸಹಿತ ಜು.6ರಂದು ದೂರು ನೀಡಿದ್ದರು.
ಶ್ವಾನ ಲಾರಾ ಸಾವು ಸಾಕಷ್ಟು ಸುದ್ದಿಯಾಗಿತ್ತು. ಕಳೆದ ಜನವರಿ 26ರಂದು ಜಯನಗರ 1ನೇ ಬ್ಲಾಕ್ನಲ್ಲಿ ರಸ್ತೆಬದಿ ಮಲಗಿದ್ದ ಬೀದಿನಾಯಿ ಮೇಲೆ ಆದಿಕೇಶವನಾಯ್ಡು ಎಂಬಾತ ಐಷಾರಾಮಿ ಆಡಿ ಕಾರನ್ನು ಹತ್ತಿಸಿಕೊಂಡು ಹೋಗಿ ಶ್ರೀಮಂತಿಕೆಯ ದರ್ಪ ಮೆರೆದಿದ್ದ. ಈ ಪ್ರಕರಣವೂ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಇದೀಗ ಈ ಘಟನೆಗಳು ಮಾಸುವ ಮುನ್ನವೇ ಇಂದಿರಾನಗರದಲ್ಲಿ ಬೀದಿನಾಯಿ ಮೇಲೆ ಕಾರು ಹತ್ತಿಸಿ ಕೊಂದಿರುವ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕ ವಯಲದಲ್ಲೂ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. ಮೂಕ ಪ್ರಾಣಿಗಳ ಮೇಲೆ ಕ್ರೌರ್ಯ ಸಲ್ಲ ಎಂಬ ಕೂಗು ದಟ್ಟವಾಗಿ ಕೇಳಿಬರುತ್ತಲೇ ಇದೆ.
ಸ್ನೇಹಾ ದೂರು ಕೊಟ್ಟ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಪೊಲೀಸರು, ಆರೋಪಿ ಅಮೃತ್ ರಾಜ್ನನ್ನು ಬಂಧಿಸಿದ್ದಾರೆ. 'ಬೇಕೆಂದು ಕೃತ್ಯ ಎಸಗಿಲ್ಲ. ಕಾರಿನ ಮುಂದೆ ನಾಯಿ ಮಲಗಿರುವುದನ್ನು ಗಮನಿಸದೆ ಆಕಸ್ಮಿಕವಾಗಿ ಘಟನೆ ನಡೆದಿದೆ' ಎಂದು ಆರೋಪಿಯು ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.