

ಹುಬ್ಬಳ್ಳಿ: ಹುಬ್ಬಳ್ಳಿ: ತನ್ನ ಗಂಡನ ವಿರುದ್ಧವೇ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 58ನೇ ವಾರ್ಡ್ನ ಸದಸ್ಯೆ ಶೃತಿ ಚಲವಾದಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಆತನಿಂದ ನನ್ನನ್ನು ರಕ್ಷಿಸಿ ಎಂದು ಮನವಿ ಮಾಡಿದ್ದಾರೆ.
ಪಾಲಿಕೆ ಸದಸ್ಯ ಶೃತಿ ತನ್ನ ಗಂಡ ಸಂತೋಷ್ ಚಲವಾದಿ ವಿರುದ್ಧ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರರಕಣ ದಾಖಲಿಸಿದ್ದಾರೆ. ರೌಡಿಶೀಟರ್ ಸಂತೋಷ ಚಲವಾದಿ ಎರಡು ಕೊಲೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಕೇಶ್ವಾಪುರದ ವಿನಯ ಪಿಳ್ಳೆ ಹಾಗೂ ಆತನ ತಂದೆ ಕುಮಾರ ಪಿಳ್ಳೆ ಕೊಲೆ ಪ್ರಕರಣದಲ್ಲಿ ಬಂಧಿಯಾಗಿದ್ದ. ಇತ್ತೀಚೆಗಷ್ಟೇ ನ್ಯಾಯಾಲಯದಿಂದ ಜಾಮೀನು ಪಡೆದು ಹೊರಗೆ ಬಂದಿದ್ದ.
ಸಂತೋಷ ಬೇರೊಬ್ಬ ಯುವತಿಯನ್ನು ಪ್ರೀತಿಸುತ್ತಿದ್ದಾನೆ. ಇದೇ ವಿಚಾರಕ್ಕೆ ಮನೆಯಲ್ಲಿ ಕಿರಿಕಿರಿ ಉಂಟು ಮಾಡಿ ಜಗಳವಾಡುತ್ತಾನೆ. "ನನಗೆ ಜೈಲು, ಪೊಲೀಸ್ ಹೊಸದಲ್ಲ. ಹೊರಗಡೆ ಹುಡುಗರನ್ನು ಕರೆಸಿ ನಿನ್ನನ್ನು ಮತ್ತು ನಿನ್ನ ಅಣ್ಣನನ್ನು ಕೊಂದು ಆಕೆಯೊಂದಿಗೆ ಬಾಳುತ್ತೇನೆ' ಎಂದು ದಮ್ಕಿ ಹಾಕಿದ್ದಾನೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ನಾನು ಗರ್ಭಿಣಿ ಎಂಬುದನ್ನೂ ಲೆಕ್ಕಿಸದೆ ಹಲ್ಲೆ ಮಾಡಿದ್ದಾನೆ. ಕಾಲಿನಿಂದ ಒದ್ದಿದ್ದಾನೆ ಎಂದು ಶೃತಿ ದೂರಿನಲ್ಲಿ ವಿವರಿಸಿದ್ದಾರೆ.
ಕೂಡಲೇ ಎಚ್ಚೆತ್ತ ಕೇಶ್ವಾಪುರ ಠಾಣೆ ಇನ್ಸ್ಪೆಕ್ಟರ್ ಜಗದೀಶ ಹಂಚಿನಾಳ ನೇತೃತ್ವದ ತಂಡ ಆರೋಪಿ ರೌಡಿಶೀಟರ್ ಸಂತೋಷನನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ.