ಸರ್ಕಾರಿ ಶಾಲೆಗೆ ಹೈಟೆಕ್ ಸ್ಪರ್ಶ

ಸರ್ಕಾರಿ ಶಾಲೆಗೆ ಹೈಟೆಕ್ ಸ್ಪರ್ಶ
Published on

ಸಿ.ಜಿ.ಪುನೀತ್ ಚಪ್ಪರದಹಳ್ಳಿ ಬೆಟ್ಟದಪುರ

ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಅತ್ತಿಗೋಡು ಗ್ರಾಮ ಪಂಚಾಯಿತಿಯಿಂದ ನರೇಗಾ ಯೋಜನೆಯ ಅನುದಾನದಿಂದ ಗ್ರಾಮದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಹೈಟೆಕ್ ಸ್ಪರ್ಶ ದೊರೆತ ಹಿನ್ನೆಲೆ ತಾಲೂಕಿಗೆ ಮಾದರಿ ಶಾಲೆಗಳಾಗಿವೆ.

ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗ ನೀಡುವ ಮಹಾತ್ಮ ಗಾಂಧಿ ನರೇಗಾ ಯೋಜನೆಯು ರಸ್ತೆ, ಚರಂಡಿ, ಮನೆ ನಿರ್ಮಾಣಕ್ಕೆ ಸಹಕಾರಿಯಾಗಿತ್ತು. ಆದರೆ ಇದೀಗ ಸರ್ಕಾರಿ ಶಾಲೆಗಳಿಗೂ ಹೈಟೆಕ್ ಟಚ್ ನೀಡುತ್ತಿರುವುದರಿಂದ ಮಕ್ಕಳು ಶಾಲೆಯತ್ತ ಆಕರ್ಷಿತರಾಗುತ್ತಿದ್ದಾರೆ. ಇಲ್ಲಿನ ಅತ್ತಿಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ(ನರೇಗಾ) ಯೋಜನೆಯಡಿ ಹತ್ತು ಹಲವು ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಮೂಲಕ ಸರ್ಕಾರಿ ಶಾಲೆಗಳ ಸ್ವರೂಪವನ್ನು ನರೇಗಾ ಯೋಜನೆ ಬದಲಾಯಿಸಿದೆ.

ಮಾದರಿ ಭೋಜನಾಲಯ ನಿರ್ಮಾಣ: ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟವನ್ನು ವಿದ್ಯಾರ್ಥಿಗಳು ಶಾಲೆಯ ಮೈದಾನ, ಕೊಠಡಿ ಅಥವಾ ಕಾರಿಡಾರ್‌ಗಳಲ್ಲಿ ಹೀಗೆ ನೆರಳಿರುವ ಕಡೆಯಲ್ಲಿ ಕುಳಿತು ತಿನ್ನಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದಕ್ಕೆ ನರೇಗಾ ಯೋಜನೆಯು ಮುಕ್ತಿ ನೀಡಿದ್ದು, ಭೋಜನಾಲಯಗಳ ನಿರ್ಮಾಣದ ಮೂಲಕ ವಿದ್ಯಾರ್ಥಿಗಳಿಗೆ ನೆರಳಲ್ಲಿ ಕುಳಿತು ಬಿಸಿಯೂಟ ಸವಿಯುವ ಅವಕಾಶ ಒದಗಿಸಿದೆ. ಈ ನಿಟ್ಟಿನಲ್ಲಿ ಅತ್ತಿಗೋಡು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಈಗಾಗಲೇ ಗ್ರಾಮ ಪಂಚಾಯಿತಿಯಿಂದ ನರೇಗಾ ಯೋಜನೆ ಮೂಲಕ ಸುಮಾರು ಹದಿನಾಲ್ಕು ಲಕ್ಷ ರೂ. ವೆಚ್ಚದಲ್ಲಿ ಭೋಜನಾಲಯ (ಡೈನಿಂಗ್) ಹಾಲ್ ನಿರ್ಮಾಣ ಮಾಡಲಾಗುತ್ತಿದೆ. ಈ ಕಾಮಗಾರಿಯು ಪ್ರಗತಿಯಲಿದ್ದು, ಬಹುತೇಕ ಮುಗಿಯುವ ಹಂತಕ್ಕೆ ತಲುಪಿದೆ. ಮಕ್ಕಳಲ್ಲಿ ಶಿಸ್ತು ಮೂಡಿಸುವ ನಿಟ್ಟಿನಲ್ಲಿ ಹಾಲ್ ನಿರ್ಮಾಣವಾಗುತ್ತಿದೆ. ಮುಖ್ಯದ್ವಾರದಲ್ಲಿ ಆಗಮಿಸಿ, ಹಾಲ್‌ನ ಸಾಲಿನಲ್ಲಿ ಕುಳಿತು ಬಳಿಕ ಊಟ ಮುಗಿಸಿ ಹಿಂಬದಿ ದ್ವಾರದಲ್ಲಿ ಕೈ ತೊಳೆದುಕೊಳ್ಳಲು ಹೋಗಬಹುದು. ಈ ಮಾದರಿಯಲ್ಲಿ ಹಾಲ್ ನಿರ್ಮಾಣವಾಗಿದೆ. ಅಲ್ಲದೇ ಭೋಜನಾಲಯವನ್ನು ವಿದ್ಯಾರ್ಥಿಗಳು ಬಿಸಿಯೂಟಕ್ಕಾಗಿ ಮಾತ್ರ ಬಳಸದೇ ಶಾಲೆಯ ವಿವಿಧ ಕಾರ್ಯಕ್ರಮಗಳು, ಪ್ರಾಯೋಗಿಕ ಚಟುವಟಿಕೆಗಳನ್ನು ನಡೆಸುವುದಕ್ಕೆ ಸಭಾಂಗಣ ಮಾದರಿಯಲ್ಲಿ ಬಳಸಬಹುದಾದಷ್ಟು ವಿಶಾಲವಾಗಿದೆ.

ಶಾಲೆಗಳ ಅಭಿವೃದ್ಧಿಗೆ ಸಹಕಾರಿಯಾದ ನರೇಗಾ: ಶಾಲೆಯ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಹಾಗೂ ಸಂಪೂರ್ಣ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಸಹಕಾರ, ನಿರಂತರ ಒಡನಾಟಗಳಿಂದ ಈ ಭಾಗದಲ್ಲಿ ಅಭಿವೃದ್ಧಿ ಕೆಲಸಗಳು ಹೆಚ್ಚಾಗಿ ನಡೆಯುತ್ತಿವೆ. ಅತ್ತಿಗೋಡು ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಒಂದೇ ಸೂರಿನಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಇನ್ನು ಶಾಲೆಗೆ ಇದುವರೆಗೆ ಅನೇಕ ರೀತಿಯಲ್ಲಿ ಪಂಚಾಯಿತಿ ವತಿಯಿಂದ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ನರೇಗಾ ಯೋಜನೆಯಿಂದ ಕಳೆದ ನಾಲ್ಕೈದು ವರ್ಷಗಳಿಂದ ಸುಮಾರು ಇಪ್ಪತ್ತು ಲಕ್ಷ ರೂ. ವೆಚ್ಚದಲ್ಲಿ ಮೂರು ಹಂತವಾಗಿ ಕಾಂಪೌಂಡ್ ನಿರ್ಮಾಣವಾಗಿವೆ. ಸುಮಾರು 9.5 ಲಕ್ಷ ರೂಪಾಯಿ ವೆಚ್ಚದಲ್ಲಿ ಆಟದ ಮೈದಾನ (ಬಾಸ್ಕೆಟ್‌ಬಾಲ್, ಟೆನಿಸ್ ಬಾಲ್ ಕೋರ್ಟ್) ಅಭಿವೃದ್ಧಿ, ಸುಮಾರು 1.40 ಲಕ್ಷ ರೂಪಾಯಿ ವೆಚ್ಚದಲ್ಲಿ ಮಳೆ ನೀರು ಕೊಯ್ಲು ನಿರ್ಮಾಣ ಮಾಡಲಾಗಿದೆ. ಅನೇಕ ಅಭಿವೃದ್ಧಿ ಕೆಲಸಗಳಿಂದ ಹೈಟೆಕ್ ಶಾಲೆಯಾಗಿ ತಾಲೂಕಿಗೆ ಮಾದರಿಯಾಗಿದೆ.

ಇದಲ್ಲದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊತ್ತವಳ್ಳಿ ಕೊಪ್ಪಲು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಧ್ವಜ ಕಂಭ ಹಾಗೂ ಪ್ಲಾಟ್ ಫಾರ್ಮ್ ನಿರ್ಮಾಣ, ವಡ್ಡರಹಳ್ಳಿ ಸರ್ಕಾರಿ ಶಾಲೆಯಲ್ಲಿ ಸ್ಮಾರ್ಟ್‌ಕ್ಲಾಸ್ ನಿರ್ಮಾಣ, ಸಂಗರಶೆಟ್ಟಹಳ್ಳಿ ಗ್ರಾಮದ ಸರ್ಕಾರಿ ಶಾಲೆಗೆ ಹಾಲ್ ಮತ್ತು ಅಡುಗೆ ಮನೆ ನಿರ್ಮಾಣ, ಮಠದ ಕೊಪ್ಪಲು ಸರ್ಕಾರಿ ಶಾಲೆಯಲ್ಲಿ ಕೊಠಡಿಗಳಿಗೆ ಟೈಲ್ಸ್ ಅಳವಡಿಕೆ ಮತ್ತು ಶೌಚಗೃಹ ನಿರ್ಮಾಣ ಸೇರಿದಂತೆ ಹಲವು ಶಾಲೆಗಳಿಗೆ ಸುಣ್ಣಬಣ್ಣ ಹೊಡೆಸಲಾಗಿದೆ. ಪಂಚಾಯಿತಿಯ ನರೇಗಾ ಯೋಜನೆಯ ಸದುಪಯೋಗದಿಂದ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಸೃಷ್ಟಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net