

ಕೆ.ಎಂ.ದೊಡ್ಡಿ: ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೈಟೆಕ್ ಸ್ಪರ್ಶ ನೀಡುವುದರ ಜತೆಗೆ ಹಲವು ಆರೋಗ್ಯ ಸೌಲಭ್ಯಗಳು ಸಿಗುವಂತೆ ಕ್ರಮ ಕೈಗೊಳ್ಳಲಾಗುವುದೆಂದು ಶಾಸಕ ಕದಲೂರು ಉದಯ್ ಭರವಸೆ ನೀಡಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಏರ್ಪಡಿಸಿದ್ದ ಆರೋಗ್ಯ ರಕ್ಷಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೊದಲ ಬಾರಿಗೆ ಹೆರಿಗೆ ಮಾಡಿಸುವುದಕ್ಕಾಗಿ ಶಸ್ತ್ರ ಚಿಕಿತ್ಸಾ ಸೌಲಭ್ಯ ಕಲ್ಪಿಸಿದ್ದರ ಪ್ರತಿಫಲವಾಗಿ ಈಗಾಗಲೇ 10ಕ್ಕೂ ಹೆಚ್ಚು ಗರ್ಭಿಣಿಯರಿಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಗಿದೆ. ಈ ಸೌಲಭ್ಯದಿಂದ ಸ್ಥಳೀಯರು ಮಂಡ್ಯಕ್ಕೆ ಅಲೆಯುವುದು ತಪ್ಪಿದಂತಾಗಿದೆ ಎಂದರು.
ಕಳೆದ ಮೂರು ತಿಂಗಳಲ್ಲಿ 80ಕ್ಕೂ ಹೆಚ್ಚು ಮಹಿಳೆಯರಿಗೆ ಹೆರಿಗೆ ಮಾಡಿಸಿರುವ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ. ಅರ್ಜುನ್‌ಕುಮಾರ್ ಸೇವೆಗೆ ಪ್ರಶಂಸೆ ವ್ಯಕ್ತಪಡಿಸಿದ ಅವರು, ಸರ್ಕಾರಿ ಆಸ್ಪತ್ರೆಯಲ್ಲಿಯೂ ಉತ್ತಮ ಚಿಕಿತ್ಸೆ ನೀಡಲಾಗುತ್ತದೆ ಎನ್ನುವ ಭರವಸೆಯನ್ನು ವೈದ್ಯರು ನೀಡುತ್ತಿದ್ದಾರೆ. ಆಸ್ಪತ್ರೆ ಸಾಕಷ್ಟು ಸುಧಾರಣೆ ಕಂಡಿದೆ ಎಂದರು.
ಆಸ್ಪತ್ರೆಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು, ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ಆಡಳಿತ ವೈದ್ಯಾಧಿಕಾರಿಗಳು ಎಚ್ಚರಿಕೆ ವಹಿಸಬೇಕು, ಆಸ್ಪತ್ರೆಯಲ್ಲಿ ಸೌಲಭ್ಯದ ಕೊರತೆ ಕಂಡುಬಂದ ಕೂಡಲೇ ತನ್ನ ಗಮನಕ್ಕೆ ತರಬೇಕು ಎಂದು ತಾಕೀತು ಮಾಡಿದರು.
ಹೈಟೆಕ್ ಶೌಚಗೃಹ: ಭಾರತೀನಗರಕ್ಕೆ ಆಗಮಿಸುವ ಮಹಿಳೆಯರಿಗೆ ಸುಸಜ್ಜಿತ ಪ್ರತ್ಯೇಕ ಶೌಚಗೃಹ ಇಲ್ಲದೆ ಪರಿತಪ್ಪಿಸುತ್ತಿದ್ದು, ತಕ್ಷಣದಲ್ಲಿಯೇ ಮಹಿಳೆಯರಿಗೆ ಪ್ರತ್ಯೇಕ ಹೈಟೇಕ್ ಶೌಚಗೃಹ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಇದಲ್ಲದೆ ಸುಲಭ್ ಶೌಚಗೃಹವನ್ನು ದುರಸ್ತಿ ಮಾಡಲಾಗುವುದು ಎಂದರು.
ಆರೋಗ್ಯ ರಕ್ಷಾ ಸಮಿತಿ ಸದಸ್ಯ ತೊರೆಬೊಮ್ಮನಹಳ್ಳಿ ಸಿದ್ದರಾಮೇಗೌಡ, ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ರವೀದ್ರ ಬಿ.ಗೌಡ, ಗ್ರಾಪಂ ಅಧ್ಯಕ್ಷೆ ಕೌಸಲ್ಯಾ ಅರ್ಕೇಶ್, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಚನ್ನಶೆಟ್ಟಿ, ಗುಡಿಗೆರೆ ಪ್ರಸಾದ್, ಆರೋಗ್ಯಾಧಿಕಾರಿ ತಮ್ಮೇಗೌಡ, ಆಡಳಿತ ವೈಧ್ಯಾಧಿಕಾರಿ ಡಾ.ಜಗದೀಶ್, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಶಿಕ್ಷಣ ಇಲಾಖೆಯ ಸುಬ್ಯಮಣ್ಯ, ಆರ್‌ಐ ಶ್ರೀನಿವಾಸ ಮತ್ತಿತರರಿದ್ದರು.