ಬೆಳಕು ನೀಡದ ಹೈಮಾಸ್ಟ್​ ದೀಪ

highmask lamp
Published on

* ಐಜೂರು, ಕನಕಪುರ ಸರ್ಕಲ್​ನಲ್ಲಿ ಆವರಿಸಿದ ಕತ್ತಲು

ವಿಭೂತಿಕೆರೆ ಶಿವಲಿಂಗಯ್ಯರಾಮನಗರ

ನಗರದ ಜಿಲ್ಲಾ ಕೇಂದ್ರದ ಪ್ರಮುಖ ವೃತ್ತಗಳಲ್ಲೇ ಹೈಮಾಸ್ಟ್​ ವಿದ್ಯುತ್​ ದೀಪಗಳು ಕೆಟ್ಟು ರಸ್ತೆ ಪೂರ್ತಿ ಕತ್ತಲು ಆವರಿಸಿ, ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ.

ರಾಮನಗರದ ಬೆಂಗಳೂರು&ಮೈಸೂರು ರಸ್ತೆಯ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣ ಮತ್ತು ಕನಕಪುರ ಸರ್ಕಲ್​ನ ದೊಡ್ಡ ಹೈಮಾಸ್ಟ್​ ಬೀದಿದೀಪಗಳು ಹಲವು ತಿಂಗಳಿನಿಂದಲೇ ಕೆಟ್ಟಿರುವ ಕಾರಣ ಪ್ರಮುಖ ವೃತ್ತಗಳಲ್ಲಿ ಕತ್ತಲು ಆವರಿಸುತ್ತಿದೆ.

ಬೆಂಗಳೂರು&ಮೈಸೂರು ರಸ್ತೆ ನಾಲ್ಕು ಪಥ ರಸ್ತೆ ಆಗಿರುವ ಕಾರಣ ಪ್ರತಿಕ್ಷಣ ನೂರಾರು ವಾಹನಗಳು ಓಡಾಟ ನಡೆಸುತ್ತವೆ. ಕನಕಪುರ ಸರ್ಕಲ್​ ಹೆಚ್ಚು ವಾಹನ ಸಂದಣಿ ಪ್ರದೇಶವಾಗಿದ್ದು, ಈ ಜಾಗದಲ್ಲಿ ಬೆಳಕಿನ ಅವಶ್ಯಕತೆ ಹೆಚ್ಚಿದೆ. ಹೆಚ್ಚಾಗಿ ಮಹಿಳೆಯರು, ಶಾಲಾ ಮಕ್ಕಳು ಈ ವೃತ್ತದಲ್ಲೇ ಬಸ್​ ಇಳಿದು ಕನಕಪುರ ಗ್ರಾಮೀಣ ಪ್ರದೇಶ ಹಾಗೂ ವಸತಿ ಪ್ರದೇಶದ ಕಡೆ ಹೋಗುತ್ತಾರೆ. ಇಂತಹ ಪ್ರಮುಖ ಸ್ಥಳದಲ್ಲಿ ಕತ್ತಲು ಆವರಿಸಿರುವ ಕಾರಣ ರಾತ್ರಿ ವೇಳೆ ಭಯದ ವಾತಾವರಣ ನಿರ್ಮಾಣವಾಗಿದೆ.

ಕನಕಪುರ ಸರ್ಕಲ್​ನಲ್ಲಿ ಅಂಗಡಿಗಳಿದ್ದು ಸಂಜೆ ಏಳು ಗಂಟೆ ನಂತರ ಹೆಚ್ಚಿನ ವ್ಯಾಪಾರಿಗಳು ಬಾಗಿಲು ಹಾಕಿ ಹೋಗುತ್ತಾರೆ. ಇದರಿಂದ ಈ ಭಾಗದಲ್ಲಿ ಬೆಳಕಿಲ್ಲದೆ ಜನರು ಕತ್ತಲಲ್ಲಿ ಓಡಾಟ ನಡೆಸಬೇಕು.

ವಿದ್ಯುತ್​ ದೀಪ ಇಲ್ಲದಿರುವುದರಿಂದ ಹಲವು ಸಮಸ್ಯೆಗೆ ಕಾರಣವಾಗುತ್ತಿದೆ. ಕನಕಪುರ ಸರ್ಕಲ್​ನಲ್ಲಿ ಸಿಸಿ ಕ್ಯಾಮರಾ ಇದ್ದರೂ ಬೆಳಕಿಲ್ಲದೆ ಅವುಗಳಿಂದ ಪ್ರಯೋಜನ ಪಡೆಯಲು ಸಾಧ್ಯವಾಗುವುದಿಲ್ಲ. ಕೆಲವು ಸಂದರ್ಭದಲ್ಲಿ ಇದೇ ವೃತ್ತದಲ್ಲಿ ಅಪಘಾತಗಳಾದ ನಿದರ್ಶನಗಳಿವೆ.

ಐಜೂರು ವೃತ್ತದಲ್ಲಿ ಸಮಸ್ಯೆ: ಐಜೂರು ವೃತ್ತದಲ್ಲೂ ಸಮಸ್ಯೆ ಎದುರಾಗಿದೆ. ರಸ್ತೆ ದಾಟಲು ಹೈಮಾಸ್ಟ್​ ದೀಪ ಅಗತ್ಯವಾಗಿದೆ. ಸಿಸಿ ಕ್ಯಾಮರಾಗಳಿದ್ದು, ವಾಹನಗಳ ಸಂಖ್ಯೆ ಕಾಣುವಂತೆ ಬೆಳಕಿನ ವ್ಯವಸ್ಥೆ ಬೇಕಾಗಿದೆ. ಕೂಡಲೇ ನಗರಸಭೆ ಕನಕಪುರ ಸರ್ಕಲ್​ ಮತ್ತು ಐಜೂರು ವೃತ್ತದಲ್ಲಿ ಹೈಮಾಸ್ಟ್​ ಬೀದಿ ದೀಪ ವ್ಯವಸ್ಥೆ ಸರಿಮಾಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಬೆಳಗದ ಬೀದಿ ದೀಪ

ಅರ್ಚಕರಹಳ್ಳಿಯಿಂದ ಕೆಎಸ್​ಆರ್​ಟಿಸಿ ಬಸ್​ ಟಕದವರೆಗೆ ರಸ್ತೆ ಮಧ್ಯೆ ಇರುವ ದೀಪಗಳು ಬೆಳಗುತ್ತಿಲ್ಲ. ರಾತ್ರಿ ವೇಳೆ ರಸ್ತೆ ಸಂಪೂರ್ಣ ಕತ್ತಲಿನಲ್ಲಿಮುಳುಗಿರುತ್ತದೆ. ಜತೆಗೆ ಬೆಂಗಳೂರು&ಮೈಸೂರು ರಸ್ತೆಯಲ್ಲಿ ಅಲ್ಲಲ್ಲಿ ಕೆಲವೊಂದು ವಿದ್ಯುತ್​ ಕಂಬಗಳಲ್ಲಿ ವಿದ್ಯುತ್​ ದೀಪಗಳು ಬೆಳಗದಂತಾಗಿವೆ.

ಪೊಲೀಸರನ್ನು ನಿಯೋಜಿಸಿ

ಕನಕಪುರ ಸರ್ಕಲ್​ ಪ್ರಮುಖ ವೃತ್ತವಾಗಿರುವ ಕಾರಣ ರಾತ್ರಿ ವೇಳೆ ಈ ವೃತ್ತದಲ್ಲಿ ಪೊಲೀಸರ ನಿಯೋಜನೆ ಬೇಕಾಗಿದೆ. ಹತ್ತಿರದಲ್ಲೇ ಶಾಲೆಗಳು, ಜನವಸತಿ ಪ್ರದೇಶ ರಸ್ತೆ ತಿರುವು ಪಡೆಯುವ ವಾಹನಗಳ ಸುರಕ್ಷತೆ ದೃಷ್ಟಿಯಿಂದ ಪೋಲೀಸರನ್ನು ರಾತ್ರಿ ವೇಳೆಯಾದರೂ ನಿಯೋಜಿಸಬೇಕು ಎಂಬುದು ಸಾರ್ವಜನಿಕರ ಮಾತು.

ಪ್ರಮುಖವಾಗಿ ಕನಕಪುರ ಸರ್ಕಲ್​ ಮತ್ತು ಐಜೂರು ಸರ್ಕಲ್​ ರಾಮನಗರದ ಪ್ರಮುಖ ವೃತ್ತಗಳು. ಆದರೆ, ಈ ವೃತ್ತಗಳಲ್ಲೇ ಹೈಮಾಸ್ಟ್​ ದೀಪ ಬೆಳಕು ಚೆಲ್ಲದೆ ನಿಂತಿವೆ. ಕನಕಪುರ ಸರ್ಕಲ್​ ಮೂರು ಪ್ರಮುಖ ರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ. ರಾತ್ರಿ ವೇಳೆ ಜನರು ವಿರಳವಾಗಿರುವ ಕಾರಣ ಜನರಿಗೆ ಬೆಳಕಿಲ್ಲದೆ ಸಮಸ್ಯೆ ಉಂಟಾಗುತ್ತಿದೆ. ನಗರಸಭೆಗೆ ಕೂಡಲೇ ಹೈಮಾಸ್ಟ್​ ವಿದ್ಯುತ್​ ದೀಪ ಸರಿಪಡಿಸಬೇಕು.> ಭಾಸ್ಕರ್​ಗ್ರಾಪಂ ಸದಸ್ಯ, ಚನ್ನಮಾನಹಳ್ಳಿಐಜೂರು ಸರ್ಕಲ್​ ಮತ್ತು ಕನಕಪುರ ಸರ್ಕಲ್​ನಲ್ಲಿವ ಹೈಮಾಸ್ಟ್​ ವಿದ್ಯುತ್​ ಸಮಸ್ಯೆ ನಗರಸಭೆ ಗಮನಕ್ಕೆ ಬಂದಿದ್ದು, ಕೂಡಲೇ ಐಜೂರು ವೃತ್ತದಲ್ಲಿನ ಹೈಮಾಸ್ಟ್​ ದೀಪ ರಿಪೇರಿ ಮಾಡಿಸಲಾಗುತ್ತಿದೆ. ಕನಕಪುರ ಸರ್ಕಲ್​ನಲ್ಲಿ ಹೈಮಾಸ್ಟ್​ ವಿದ್ಯುತ್​ ಕಂಬದ ಮಧ್ಯ ಭಾಗದಲ್ಲೇ 11 ಕಿ.ವ್ಯಾ. ವಿದ್ಯುತ್​ ಹಾದು ಹೋಗಿದ್ದು ರಿಪೇರಿಗೆ ಸಮಯ ಬೇಕಾಗಿದೆ. ಎರಡೂ ಸ್ಥಳಗಳಲ್ಲಿ ಕೂಡಲೇ ದೀಪ ಬೆಳಗುವಂತೆ ನಗರಸಭೆ ಮಾಡುತ್ತದೆ.> ಡಾ. ಜಯಣ್ಣಆಯುಕ್ತರು, ನಗರಸಭೆ, ರಾಮನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net