

Blue Egg : ಈ ಪ್ರಕೃತಿಯೇ ವಿಸ್ಮಯಗಳ ಆಗರ. ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ಹೀಗೆ ಯಾರಿಗೂ, ಯಾವ ಕ್ಷೇತ್ರಕ್ಕೂ ನಿಲುಕದ ನಿಗೂಢಗಳು ಅದೆಷ್ಟೋ ಈ ಭೂಮಿಯ ಮೇಲೆ ನಡೆದಿವೆ, ನಡೆಯುತ್ತಲೇ ಇವೆ. ಅವುಗಳ ಪೈಕಿ ಕೆಲವು ಘಟನೆಗಳಿಗೆ ವೈಜ್ಞಾನಿಕ ಮೂಲ ನೀಡಿದರೂ, ಇನ್ನೆಷ್ಟೋ ಘಟನೆಗಳು ಊಹೆಗೂ ಮೀರಿದ್ದೇ ಆಗಿವೆ.
ಇದೀಗ ಮತ್ತೊಂದು ವಿಸ್ಮಯಕಾರಿ ಘಟನೆ ನಮ್ಮ ಕರ್ನಾಟಕದಲ್ಲಿ ನಡೆದಿದೆ. ಸಾಮಾನ್ಯವಾಗಿ ಕೋಳಿ ಮೊಟ್ಟೆಗಳು ಬಿಳಿ ಅಥವಾ ಗಾಢ ಕಂದು ಬಣ್ಣದಲ್ಲಿರುತ್ತವೆ. ಇದನ್ನು ಹೊಸದಾಗಿ ಹೇಳಬೇಕಿಲ್ಲ. ಈ ಬಗ್ಗೆ ಯಾರನ್ನೇ ಕೇಳಿದರು ಈ ಎರಡು ಬಣ್ಣಗಳನ್ನು ಮಾತ್ರ ಹೇಳುತ್ತಾರೆ. ಆದರೆ, ದಾವಣಗೆರೆ ಜಿಲ್ಲೆಯಲ್ಲಿ ಒಂದು ಕೋಳಿ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಏಕೆಂದರೆ, ಈ ಕೋಳಿ ಇಟ್ಟ ಮೊಟ್ಟೆ ನೀಲಿ ಬಣ್ಣದ್ದಾಗಿದ್ದು, ಸ್ಥಳೀಯವಾಗಿ ಭಾರಿ ಸಂಚಲನ ಮೂಡಿಸಿದೆ.
ದಾವಣಗೆರೆಯ ನಲ್ಲೂರು ಗ್ರಾಮದ ನಿವಾಸಿ ಸೈಯದ್ ನೂರ್ ಅವರ ಬಳಿ ಸುಮಾರು 10 ಕೋಳಿಗಳಿವೆ. ಈ ಕೋಳಿಗಳಲ್ಲಿ ಒಂದು ಇತ್ತೀಚೆಗೆ ನೀಲಿ ಮೊಟ್ಟೆಯನ್ನು ಇಟ್ಟಿದೆ. ಅದನ್ನು ಸೈಯದ್ ನೂರ್ ಆರಂಭದಲ್ಲಿ ಆಶ್ಚರ್ಯಚಕಿತರಾದರು. ನಂತರ, ಅವರು ಮೊಟ್ಟೆಯನ್ನು ಎಚ್ಚರಿಕೆಯಿಂದ ಸಂರಕ್ಷಿಸಿ, ಒಂದೆಡೆ ಇಟ್ಟಿದ್ದಾರೆ. ಕೋಳಿ ನೀಲಿ ಬಣ್ಣದ ಮೊಟ್ಟೆ ಇಟ್ಟಿದೆ ಎಂಬ ಸುದ್ದಿ ಸ್ಥಳೀಯವಾಗಿ ಹರಡಿದ ಕೂಡಲೇ ಸುತ್ತಮುತ್ತಲಿನ ಹಳ್ಳಿಗಳ ಜನ ಸೈಯದ್ ನೂರ್ ಅವರ ನಿವಾಸದ ಜಮಾಯಿಸಿದರು. ಮೊಟ್ಟೆಯನ್ನು ನೋಡಿ ಹೀಗೋ ಉಂಟೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಈ ವಿಷಯ ಪ್ರಾಣಿ ಸಂರಕ್ಷಣಾ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ತಕ್ಷಣ ಸೈಯದ್ ನೂರ್ ಅವರ ನಿವಾಸಕ್ಕೆ ತೆರಳಿ ಕೋಳಿಯನ್ನು ಪರೀಕ್ಷೆ ಮಾಡಿದ್ದಾರೆ. ಕೆಲವೊಮ್ಮೆ ಕೋಳಿಗಳು ತಿಳಿ ಹಸಿರು ಮೊಟ್ಟೆಗಳನ್ನು ಇಟ್ಟಿರುವ ಉದಾಹರಣೆಗಳಿವೆ. ಆದರೆ, ನೀಲಿ ಬಣ್ಣದ ಮೊಟ್ಟೆ ಬಹಳ ಅಪರೂಪ. ಇದೇ ಮೊದಲು ಎನ್ನಬಹುದು. ಕೋಳಿಯ ಯಕೃತ್ತಿನಲ್ಲಿರುವ ಬಿಲಿವರ್ಡಿನ್ ಎಂಬ ವರ್ಣದ್ರವ್ಯದಿಂದಾಗಿ ಮೊಟ್ಟೆ ನೀಲಿ ಬಣ್ಣಕ್ಕೆ ತಿರುಗಿರಬಹುದು ಎಂದು ಅಧಿಕಾರಿಗಳು ಊಹಿಸಿದ್ದಾರೆ.
ಅನುವಂಶಿಕ ಬದಲಾವಣೆಗಳಿಂದಾಗಿ, ಕೋಳಿಗಳು ಕೆಲವೊಮ್ಮೆ ವಿಭಿನ್ನ ಬಣ್ಣಗಳಲ್ಲಿ ಮೊಟ್ಟೆಗಳನ್ನು ಇಡಬಹುದು ಎಂದು ಪ್ರಾಣಿ ತಜ್ಞರು ಹೇಳಿದ್ದಾರೆ. ಆದಾಗ್ಯೂ, ಪೌಷ್ಟಿಕಾಂಶದ ಮೌಲ್ಯದ ವಿಷಯದಲ್ಲಿ ಈ ಮೊಟ್ಟೆಗಳು ಸಾಮಾನ್ಯ ಮೊಟ್ಟೆಗಳಂತೆಯೇ ಇರುತ್ತವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಬಣ್ಣದ ಮೊಟ್ಟೆಗಳು ಹೊಸದೇನಲ್ಲ ಎಂದಿದ್ದಾರೆ. ಲ್ಯಾಟಿನ್ ಅಮೆರಿಕನ್ ದೇಶಗಳಲ್ಲಿ ಬೆಳೆಸಲಾದ ಕೆಲವು ವಿಶೇಷ ತಳಿಗಳ ಕೋಳಿಗಳು ನೀಲಿ ಮತ್ತು ಹಸಿರು ಮೊಟ್ಟೆಗಳನ್ನು ಇಡುತ್ತವೆ ಎಂದು ಅವರು ತಜ್ಞರು ಹೇಳಿದ್ದಾರೆ. ಆ ಕೋಳಿಗಳಲ್ಲಿ ಬಿಲಿವರ್ಡಿನ್‌ನ ಹೆಚ್ಚಿನ ಅಂಶವು ಮುಖ್ಯ ಕಾರಣ ಎಂದು ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ. (ಏಜೆನ್ಸೀಸ್)