ರಾಮನಗರದಲ್ಲಿ ಜಲಸ್ಫೋಟ: ನೆರೆಪೀಡಿತ ಪ್ರದೇಶಕ್ಕೆ ಸಿಎಂ ಬೊಮ್ಮಾಯಿ, ಎಚ್​ಡಿಕೆ ಭೇಟಿ

ramanagara rain
Published on

ರಾಮನಗರ: ಮಳೆ ಹಾನಿ ಪ್ರದೇಶಕ್ಕೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ ನೀಡಿದ್ದು, ಪರಿಸ್ಥಿತಿ ವೀಕ್ಷಣೆ ಮಾಡುತ್ತಿದ್ದಾರೆ. 500 ಮೀಟರ್​ಗೂ ಹೆಚ್ಚು ದೂರ ರೈಲ್ವೆ ಹಳಿ ಮೇಲೆ ನಡೆದು ಬಕ್ಷಿ ಕೆರೆ ವೀಕ್ಷಣೆ ಮಾಡಿದ ಸಿಎಂಗೆ ಎಚ್​ಡಿಕೆ, ಸಚಿವರಾದ ಆರ್​.ಅಶೋಕ್​, ಡಾ.ಸಿ.ಎನ್​.ಅಶ್ವಥ್ ನಾರಾಯಣ್​​, ಶಾಸಕಿ ಅನಿತಾ ಕುಮಾರಸ್ವಾಮಿ ಸಾಥ್​ ನೀಡಿದ್ದಾರೆ. ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ವೀಕ್ಷಣೆ ಮಾಡುತ್ತಿದ್ದಾರೆ.

ರಣಭೀಕರ ಮಳೆಗೆ ರಾಮನಗರ ಅಕ್ಷರಶಃ ತತ್ತರಿಸಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಕಂಡೂಕೇಳರಿಯದಂತಹ ಮಳೆಯಾಗಿದ್ದು, ನೀರು ತುಂಬಿರುವ ಬಡಾವಣೆಗಳಲ್ಲಿ ಗಂಜಿ ಕೇಂದ್ರ ತೆರೆಯಲಾಗುತ್ತಿದೆ. ಹಾನಿ ಪ್ರದೇಶದ ಜನರಿಗೆ ಸೂಕ್ತ ಪರಿಹಾರ ನೀಡಲಾಗುತ್ತದೆ. ಈ ರೀತಿಯ ಮಳೆ ರಾಮನಗರ ಜಿಲ್ಲೆಯಲ್ಲಿ ಬಿದ್ದರಲಿಲ್ಲ. ಸರ್ಕಾರ ಏನು ಮಾಡುತ್ತೋ ಮಾಡಲಿ. ನಾನು ನನ್ನ ವೈಯಕ್ತಿಕವಾಗಿ ಈ ಜನರಿಗೆ ಸಹಾಯ ಮಾಡುತ್ತೇನೆ ಎಂದು ಎಚ್​ಡಿಕೆ ಹೇಳಿದ್ದಾರೆ. ಸಿಎಂ ಆಗಮನಕ್ಕೂ ಮುನ್ನಾ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದ ಎಚ್​ಡಿಕೆ, ಜನರ ಕಷ್ಟ ಆಲಿಸಿದರು. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕಳಪೆಯಾಗಿದೆ. ಈ ಕಾರಣದಿಂದ ಈ ರೀತಿಯ ಅನಾಹುತಗಳು ಆಗಿವೆ. ಪಕ್ಷಭೇದ ಮರೆತು ಎಲ್ಲರಿಗೂ ಪರಿಹಾರ ನೀಡಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ರಾಮನಗರದ ಗೌಸಿಯಾ ನಗರದ ತುರುಪ್ ಲೈನ್ ರಸ್ತೆ ನದಿಯಂತಾಗಿದ್ದು, ಮನೆಗಳಲ್ಲಿ ಸಿಲುಕೊಂಡಿರುವ ಪ್ರವಾಹದಲ್ಲಿ ಸಿಲುಕಿದ ಜನರನ್ನು ಬೋಟ್​ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ರಾಮನಗರದ ಕನಕಪುರ ಸರ್ಕಲ್‌ ಬಳಿಯ ರಂಗರಾಯನದೊಡ್ಡಿ ಕೆರೆ ಕೋಡಿ ಬಿದ್ದ ಹಿನ್ನೆಲೆ ರಾಜಕಾಲುವೆ ನೀರು ಹೆದ್ದಾರಿಗೆ ಹರಿದು ಭೂಕುಸಿತ ಉಂಟಾಗಿದೆ. ರಾಮನಗರದ ಟಿಪ್ಪು ನಗರದಲ್ಲಿ ನೂರಾರು ಮನೆಗಳಿಗೆ ನೀರು ನುಗ್ಗಿದೆ. ರಾಮನಗರ ಮತ್ತು ಚನ್ನಪಟ್ಟಣ ರೈಲು ನಿಲ್ದಾಣದಲ್ಲಿಯೂ ನೀರು ತುಂಬಿದೆ. ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿರುವ ರಾಮಕೃಷ್ಣ ಆಸ್ಪತ್ರೆಯ ಹೊರರೋಗಿಗಳ ವಿಭಾಗ ಸಂಪೂರ್ಣ ಮುಳುಗಡೆಯಾಗಿದ್ದು, ರೋಗಿಗಳನ್ನು ಸ್ಥಳಾಂತರಿಸಲಾಗಿದೆ. ಬಿಡದಿ ಪರಸಭೆಯ 21ನೇ ವಾರ್ಡ್ ವ್ಯಾಪ್ತಿ ತೊರೆದೊಡ್ಡಿಯಲ್ಲಿ ಬೃಹತ್‌ ಆಲದಮರ ಕಾರಿನ ಮೇಲೆ ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಬೋರೆಗೌಡ(50) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಂಗಳೂರು-ಮೈಸೂರು ರಸ್ತೆ ಜಲಾವೃತಗೊಂಡಿದ್ದು, ವಾಹನಗಳಲ್ಲಿ ಮುಳುಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net