

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಮತ್ತು ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಮುಳುಗಡೆಯಾಗಿದೆ. ಕುಮಾರಧಾರಾ, ನೇತ್ರಾವತಿ ನದಿಗಳು ತುಂಬಿ ಹರಿಯುತ್ತಿವೆ.
ಕುಮಾರಧಾರ ನದಿಯ ನೀರಿನ ಹರಿವು ಹೆಚ್ಚಿರುವ ಪರಿಣಾಮ ಭಕ್ತರು ಸ್ನಾನ ಘಟ್ಟದಲ್ಲಿ ನೀರಿಗೆ ಇಳಿಯದಂತೆ ಸೂಚನೆ ಇದೆ. ಆದರೂ ಕೆಲ ಭಕ್ತರು ಅಪಾಯವನ್ನೂ ಲೆಕ್ಕಿಸದೆ ಪ್ರವಾಹ ನೀರಿನಲ್ಲೇ ತೀರ್ಥ ಸ್ನಾನ ನೆರವೇರಿಸುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾದ್ಯಂತ ನಾಲ್ಕೈದು ದಿನಗಳಿಂದ ಧಾರಾಕಾರ ಮಳೆ ಸುರಿದಿದ್ದು, ತಗ್ಗುಪ್ರದೇಶಗಳು ಮಿನಿ ಕೆರೆಯಂತಾಗಿದ್ದು, ರಸ್ತೆಗಳು ಜಲಾವೃತಗೊಂಡಿವೆ. ಮಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಬೆಳ್ತಂಗಡಿ, ಸುಳ್ಯ ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿದೆ.
ಬೆಳ್ತಂಗಡಿ ತಾಲೂಕಿನಲ್ಲಿ ವರುಣನ ಆರ್ಭಟ ಜೋರಾಗಿದ್ದು, ತಾಲೂಕಿನ ಎಲ್ಲ ಅಂಗನವಾಡಿಯಿಂದ ಪದವಿ ಕಾಲೇಜುಗಳ ವರೆಗೂ ಶಾಲಾ-ಕಾಲೇಜುಗಳಿಗೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ರಜೆ ಘೋಷಿಸಿದ್ದಾರೆ.