ರಾಜ್ಯದ ಹಲವೆಡೆ ವರುಣನ ಆರ್ಭಟ: ಕೋಡಿಬಿದ್ದ ಕೆರೆಗಳು, ಕೃಷಿಭೂಮಿ ಜಲಾವೃತ, ಜನಜೀವನ ಅಸ್ತವ್ಯಸ್ತ

rain arakalagudu
Published on

ಬೆಂಗಳೂರು: ರಾಜ್ಯದ ಹಲವೆಡೆ ಧಾರಾಕಾರ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮಹಾಲಯ ಅಮಾವಸ್ಯೆ ಹಬ್ಬದ ಆಚರಣೆಯಲ್ಲಿದ್ದ ಜನರಿಗೆ ಬೆಳ್ಳಂಬೆಳಗ್ಗೆ ಸುರಿದ ಜಿಟಿಜಿಟಿ ಮಳೆಯು ಕಿರಿಕಿರಿ ಉಂಟು ಮಾಡಿತು. ಹಲವೆಡೆ ಮೋಡಕವಿದ ವಾತಾವರಣ ಇದೆ.

ಹಾಸನದಲ್ಲಿ ಮಳೆ ತಂದ ಅವಾಂತರ ಅಷ್ಟಿಷ್ಟಲ್ಲ: ಅರಕಲಗೂಡು ತಾಲೂಕಿನ ರಾಮನಾಥಪುರ ಹೋಬಳಿಯಲ್ಲಿ ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಯಾಗಿದ್ದು, ಹಲವು ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಬೃಹತ್​ ಮರವೊಂದು ರಸ್ತೆಗೆ ಬಿದ್ದಿದೆ. ಕೆಲವೆಡೆ ರಸ್ತೆ ಕೊಚ್ಚಿಕೊಂಡು ಹೋಗಿದೆ. ಗ್ರಾಮದ ಕೆರೆ ಕೋಡಿ ಬಿದ್ದಿದೆ. ಬಸವಾಪಟ್ಟಣ ಗ್ರಾಮದಲ್ಲಿ 30 ಮನೆಗಳಿಗೆ ನೀರು ನುಗ್ಗಿ, ದಿನ ಬಳಕೆ ವಸ್ತುಗಳು ಹಾನಿಯಾಗಿವೆ. ಕಾಳೇನಹಳ್ಳಿ ಗ್ರಾಮದಲ್ಲಿ ಮಳೆನೀರಿಗೆ ರಸ್ತೆ ಕೊಚ್ಚಿಹೋಗಿದೆ. ಆಂಜನೇಯ ಹೊಸಹಳ್ಳಿ ಕೆರೆ ಕೋಡಿ ಬಿದ್ದಿದೆ. ರಾತ್ರೋರಾತ್ರಿ ಸ್ಥಳಕ್ಕೆ ಭೇಟಿ ನೀಡಿದ ಆರ್‌ಐ ಸ್ವಾಮಿ, ವಿಎಗಳಾದ ಮದನ್, ಯಾದವ್, ಉಮೇಶ್, ಪೂಜಾರಿ ಮತ್ತು ತಂಡದಿಂದ ಪರಿಹಾರ ಕಾರ್ಯ ನಡೆಯಿತು. ಕೇರಳಪುರ ಕಾಳೆನಹಳ್ಳಿ ಕೆರೆ ಕೋಡಿ ಬಿದ್ದಿದ್ದು, ನಿರ್ಮಾಣ ಹಂತದ ರಸ್ತೆ ಸೇತುವೆ ಕೊಚ್ಚಿಹೋಗಿದೆ. ಮೈಸೂರು ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಜಿಟ್ಟೆನಹಳ್ಳಿ ಹಾರಂಗಿ ನಾಲೆ ಒಡೆದು ಊರಿಗೆ ನೀರು ನುಗ್ಗಿದೆ.

ದಾವಣಗೆರೆಯಲ್ಲಿ ವರುಣನ ಆರ್ಭಟ: 2 ದಿನಗಳಿಂದ ಬಿಟ್ಟುಬಿಟ್ಟು ಸುರಿಯುತ್ತಿರುವ ಮಳೆ, ಇಂದು ಕೂಡ ದಾವಣಗೆರೆಯಲ್ಲಿ ಸುರಿದಿದೆ. ಮಳೆ ಆರ್ಭಟಕ್ಕೆ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಹೊಲ-ಗದ್ದೆ-ತೋಟಗಳು ಜಲಾವೃತಗೊಂಡಿವೆ. ಹರಿಹರ ತಾಲೂಕಿನ ಸಂಕ್ಲೀಪುರದಲ್ಲಿ ಕೃಷಿಭೂಮಿ ನೀರಲ್ಲಿ ಮುಳುಗಡೆಯಾಗಿದೆ. ದೇವರಬೆಳಕೆರೆ ಪಿಕಪ್ ಹಿನ್ನಿರಿನಿಂದ ಸಂಕ್ಲೀಪುರ-ಮುಕ್ತೇನಹಳ್ಳಿ ರಸ್ತೆ ಬಂದ್ ಆಗಿದೆ.

ಚಿಕ್ಕಮಗಳೂರಲ್ಲಿ ವರುಣನ ಆರ್ಭಟ: ತರೀಕೆರೆ ತಾಲೂಕಿನಲ್ಲಿ ಇಂದು ಬೆಳಗ್ಗೆಯಿಂದ ಧಾರಾಕಾರ ಮಳೆಯಾಗಿದ್ದು, ಅಡಿಕೆ ತೋಟದಲ್ಲಿ ಮೂರ್ನಾಲ್ಕು ಅಡಿ ಎತ್ತರದಷ್ಟು ನೀರು ನಿಂತಿದೆ. ಸುಣ್ಣದಹಳ್ಳಿ ಕೆರೆ ಕೋಡಿ ಬಿದ್ದಿದೆ. ಮೂಡಿಗೆರೆ ತಾಲೂಕಿನ ಮೇಗೂರು ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಾಂಪೌಡ್ ಕುಸಿದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದು ಅಡಿ ಎತ್ತರಕ್ಕೆ ಮಳೆ ನೀರು ನಿಂತಿದೆ. ಕೊಟ್ಟಿಗೆಹಾರ, ಜಾವಳಿ, ಬಣಕಲ್, ಬಾಳೂರು ಸುತ್ತಮುತ್ತ ಮಳೆಯಾಗಿದೆ.

ಬೆಂಗಳೂರಲ್ಲೂ ಮಳೆ: ಭಾನುವಾರ ಸುರಿದ ಮಳೆಗೆ ಬೆಂಗಳೂರು ತತ್ತರಿಸಿದ್ದು, ತಗ್ಗುಪ್ರದೇಶದ ಮನೆಗಲಿಗೆ ನೀರು ನುಗ್ಗಿ ಜನರಿಗೆ ಸಂಕಷ್ಟ ತಂದೊಡ್ಡಿತ್ತು. ಹತ್ತಾರು ಮರಗಳು ಬಿದ್ದು, ರಸ್ತೆಯಲ್ಲಿ ಸಂಚಾರ ವ್ಯತ್ಯಯ ಉಂಟುಮಾಡಿತ್ತು. ಮಂಗಳವಾರ ರಾತ್ರಿಯಿಡೀ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಆನೇಕಲ್ ಪಟ್ಟಣದಿಂದ ತಮಿಳುನಾಡಿಗೆ ಹೋಗುವ ಪ್ರಮುಖ ರಸ್ತೆಯಲ್ಲಿ ಬಿದ್ದಿದ್ದ ಗುಂಡಿಗಳಲ್ಲಿ ನೀರು ತುಂಬಿದ್ದು, ವಾಹನ ಸವಾರರಿಗೆ ಸಮಸ್ಯೆ ಎದುರಾಗಿದೆ. ಇನ್ನು ಬುಧವಾರ ಬೆಳ್ಳಂಬೆಳಗ್ಗೆಯೂ ಬೆಂಗಳೂರಲ್ಲಿ ಮಳೆ ಸುರಿದಿದೆ. ತುಮಕೂರು ಜಿಲ್ಲೆ ಕುಣಿಗಲ್​ನಲ್ಲೂ ಬೆಳ್ಳಂಬೆಳಗ್ಗೆ ಮಳೆಯಾಗಿದೆ.

ಶಿವಮೊಗ್ಗದಲ್ಲಿ ಮನೆಗಳಿಗೆ ನುಗ್ಗಿದ ಚರಂಡಿ ನೀರು: ಇಂದು ಬೆಳಗಿನಿಂದ ಆರಂಭಗೊಂಡ ಮಳೆ, ಮಧ್ಯಾಹ್ನದ ವೇಳೆಗೆ ಬಿರುಸುಗೊಂಡಿತು. ಶಿವಮೊಗ್ಗದ ಹೊಸಮನೆ‌ ಬಡಾವಣೆಯಲ್ಲಿ ಮನೆಗಳಿಗೆ ಚರಂಡಿ ನೀರು ನುಗ್ಗಿದೆ. ಮನೆಯಲ್ಲಿ ತುಂಬಿಕೊಂಡ ನೀರನ್ನು ಹೊರ ಹಾಕಲು ನಿವಾಸಿಗಳು ಹರಸಾಹಸ ಪಡುತ್ತಿದ್ದು, ಪಂಪ್​ಸೆಟ್ ಮೂಲಕ ನೀರು ಹೊರಹಾಕುತ್ತಿದ್ದ ದೃಶ್ಯ ಕಂಡು ಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net