

ಬೆಂಗಳೂರು: ಜಿಲ್ಲಾ ಹಾಲು ಒಕ್ಕೂಟಗಳ ಕೆಲಸಗಾರರ ನೇಮಕದಲ್ಲಿ ಅಕ್ರಮಗಳಾಗಿವೆ ಎಂದು ಸಾರಾಸಗಟು ಆರೋಪಿಸಿ ಗಾಳಿಯಲ್ಲಿ ಗೋಪುರ ಕಟ್ಟುವುದು ಬೇಡವೆಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಗೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಕುಟುಕಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಸೋಮವಾರ ಪ್ರತಿಕ್ರಿಯಿಸಿದ ಸಚಿವರು, ಜಿಲ್ಲಾ ಸಹಕಾರ ಒಕ್ಕೂಟಗಳಲ್ಲಿ ನೇಮಕ ಪಾರದರ್ಶಕವಾಗಿ ನಡೆಯುತ್ತಿಲ್ಲ. ಪ್ರತಿಯೊಂದು ಹುದ್ದೆಗೆ 25 ರಿಂದ 50 ಲಕ್ಷ ರೂ. ಲಂಚ ನಿಗದಿಪಡಿಸಿದ್ದು, ಹಿಂದೆ ಆಡಳಿತ ನಡೆಸಿದವರು, ಈಗ ಆಡಳಿತ ನಡೆಸುತ್ತಿರುವವರಿಗೆ ಇದೆಲ್ಲವೂ ಗೊತ್ತು ಎಂದು ಕುಮಾರಸ್ವಾಮಿ ಆಪಾದಿಸಿದ್ದಾರೆ. ಹಿಂದೆ ಅವರದೇ ನೇತೃತ್ವದ ಸಮ್ಮಿಶ್ರ ಸರ್ಕಾರವಿತ್ತು. ಬಂಡೆಪ್ಪ ಖಾಶೆಂಪುರ ಸಹಕಾರ ಸಚಿವರಾಗಿದ್ದರು. ಅವರ ಹಿರಿಯ ಸೋದರ ಎಚ್.ಡಿ.ರೇವಣ್ಣ ಕೆಎಂಎಫ್ ಅಧ್ಯಕ್ಷರಾಗಿದ್ದರು. ಆಗ ಅಕ್ರಮ ತಡೆಯಲು ಪ್ರಯತ್ನಿಸಲಿಲ್ಲವೇಕೆ? ಸುಮ್ಮನೆ ಆರೋಪ ಮಾಡುವುದ ಬಿಟ್ಟು ನಿರ್ದಿಷ್ಟ ದಾಖಲೆ ಇಟ್ಟು ಮಾತನಾಡಲಿ ಎಂದು ಸವಾಲೆಸೆದರು.
ಕರೊನಾ ಸಂದರ್ಭದಲ್ಲಿ 15 ಹಾಲು ಒಕ್ಕೂಟಗಳ ಪೈಕಿ 10 ಒಕ್ಕೂಟಗಳ ಐದು ಸಾವಿರ ಹುದ್ದೆಗಳ ಭರ್ತಿಗೆ ಆದೇಶ ಹೊರಡಿಸಲಾಗಿತ್ತು. ನೇಮಕ ಪರೀಕ್ಷೆಯಲ್ಲಿ ಅಕ್ರಮಗಳಾಗಿವೆ ಎಂದು ಸಂಸದ ಡಿ.ಕೆ.ಸುರೇಶ್ ದೂರು ನೀಡಿದ ಹಿನ್ನೆಲೆಯಲ್ಲಿ ತನಿಖೆಗೆ ಹಿರಿಯ ಅಧಿಕಾರಿಯೊಬ್ಬರನ್ನು ನೇಮಿಸಿದ್ದು, ಸಂಬಂಧಿಸಿದ ಅಧಿಕಾರಿ ವರದಿ ನೀಡಿದ್ದಾರೆ ಎಂದರು.
ಎಲ್ಲ ಹಾಲು ಒಕ್ಕೂಟಗಳಲ್ಲಿ ಅಕ್ರಮಗಳಾಗಿವೆ ಎಂದು ಕುಮಾರಸ್ವಾಮಿ ಹೇಳಿದರೆ ಹೇಗೆ? ಬಹುಶಃ ಅವರು ಸಿಎಂ ಆಗಿದ್ದ ಅವಧಿಯಲ್ಲಿ ಆದ ಅಕ್ರಮಗಳನ್ನು ಈಗ ಹೇಳುತ್ತಿರಬಹುದು ಎಂದು ಎಸ್.ಟಿ.ಸೋಮಶೇಖರ್ ತಿರುಗೇಟು ನೀಡಿದರು.