More

    ಎಫ್​ಡಿಎನಲ್ಲೂ ಡೀಲ್! ಪರೀಕ್ಷೆಗೆ ಮೊದಲೇ ಪ್ರಶ್ನೆಪತ್ರಿಕೆ ಸೋರಿಕೆ ರಹಸ್ಯ ಬಯಲು

    | ಬಾಬುರಾವ ಯಡ್ರಾಮಿ ಕಲಬುರಗಿ

    ಪಿಎಸ್​ಐ ನೇಮಕ ಪರೀಕ್ಷೆಗೆ ಮೊದಲೇ ಪ್ರಶ್ನೆಪತ್ರಿಕೆ ಸೋರಿಕೆ ಆಗಿತ್ತೆಂಬ ವಿಷಯವನ್ನು ಸಿಐಡಿ ತಂಡ ಬಯಲಿಗೆಳೆದಿದೆ. ಪ್ರಕರಣದ ಕಿಂಗ್​ಪಿನ್ ಆರ್.ಡಿ.ಪಾಟೀಲ್(ರುದ್ರಗೌಡ ಪಾಟೀಲ್) ಎಫ್​ಡಿಎ, ಎಸ್​ಡಿಎ ನೌಕರಿ ಕೊಡಿಸುವ ಡೀಲ್ ಕೂಡ ನಡೆಸುತ್ತಿದ್ದರೆಂಬುದು ವಿಚಾರಣೆ ವೇಳೆ ಬಹಿರಂಗಗೊಂಡಿರುವುದಾಗಿ ತಿಳಿದು ಬಂದಿದೆ. ಮತ್ತೊಂದೆಡೆ ಕಿರಿಯ ಇಂಜಿನಿಯರ್ ಪರೀಕ್ಷೆಯ ಉತ್ತರ ಹೇಳುವ ವಿಡಿಯೋವೊಂದು ವೈರಲ್ ಆಗಿದೆ.

    ಪಿಎಸ್​ಐ ನೇಮಕ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ಅಕ್ರಮವೆಸಗಿದ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಆರ್.ಡಿ. ಪಾಟೀಲ್ ಅವರನ್ನು ವಿಚಾರಣೆಗೆ ಒಳಪಡಿಸಲು ನ್ಯಾಯಾಲಯ ಭಾನುವಾರ 13 ದಿನ ಸಿಐಡಿ ವಶಕ್ಕೆ ಒಪ್ಪಿಸಿದೆ. ಪಾಟೀಲ್ ಜತೆಗಿದ್ದ ಜತೆಗಿದ್ದ ತಾಪಂ ಮಾಜಿ ಸದಸ್ಯ ಮಲ್ಲುಗೌಡ ಅಲಿಯಾಸ್ ಮಲ್ಲಿಕಾರ್ಜುನ ಬಿದನೂರ ಎಂಬುವರನ್ನೂ ಸಿಐಡಿ ಬಂಧಿಸಿದೆ. ಈ ಮೂಲಕ ಬಂಧಿತರ ಸಂಖ್ಯೆ 15ಕ್ಕೇರಿದೆ. ಮಲ್ಲುಗೌಡ 2014ರಲ್ಲಿ ಅಫಜಲಪುರ ತಾಲೂಕಿನ ಬಿದನೂರ ತಾಪಂ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಸಣ್ಣಪುಟ್ಟ ಗುತ್ತಿಗೆ ಕೆಲಸ ಮಾಡಿಕೊಂಡಿದ್ದರು. ಆ ಕೆಲಸಗಳಿಗಾಗಿ ಆರ್.ಡಿ.ಪಾಟೀಲ್ ಬಳಿ 50 ಲಕ್ಷ ರೂ. ಸಾಲ ಪಡೆದಿದ್ದರು. ಮಲ್ಲುಗೌಡನ ಪತ್ನಿ ತವರು ಸೊಲ್ಲಾಪುರ ಆಗಿದ್ದರಿಂದ ಆರ್.ಡಿ.ಪಾಟೀಲ್ ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಳ್ಳಲು ಸಹಾಯ ಮಾಡಿದ ಆರೋಪ ಅವರ ಮೇಲಿದೆ. ಆರ್.ಡಿ.ಪಾಟೀಲ್​ರನ್ನು ಶನಿವಾರ ಸಂಜೆ ಪುಣೆ ಹೊರವಲಯದಲ್ಲಿ ಸಿಐಡಿ ಪೊಲೀಸರು ಬಂಧಿಸಿ ಭಾನುವಾರ ನಸುಕಿನ ಜಾವ 3ರ ಸುಮಾರಿಗೆ ಕಲಬುರಗಿಗೆ ಕರೆತಂದರು.

    ಬೆಳಗ್ಗಿನ 5ರವರೆಗೆ ವಿಚಾರಣೆ ನಡೆಸಿ ಇನ್ನಷ್ಟು ಮಾಹಿತಿ ಕಲೆ ಹಾಕಿದರು. ತನ್ನ ವಶದಲ್ಲಿರುವ ಬಂಧಿತರನ್ನು ಶನಿವಾರ ತಡರಾತ್ರಿಯಿಂದ ಭಾನುವಾರ ನಸುಕಿನ ಜಾವದವರೆಗೂ ಸಿಐಡಿ ಅಧಿಕಾರಿಗಳು ಪ್ರಶ್ನಿಸಿ ಮೂಲಕ ಮಾಹಿತಿ ಕಲೆ ಹಾಕಿದರು. ನಂತರ ಎಲ್ಲರನ್ನು ಜಿಮ್್ಸ ಆಸ್ಪತ್ರೆಗೆ ಕರೆದೊಯ್ದು ಆರೋಗ್ಯ ತಪಾಸಣೆ ಮಾಡಿಸಿದ ಬಳಿಕ ವಿಚಾರಣೆ ಮುಂದುವರಿಸಿದ್ದಾರೆ.

    ಓಎಂಆರ್ ಶೀಟ್, ಹಾಲ್​ಟಿಕೆಟ್ ಪತ್ತೆ: ಆರ್.ಡಿ.ಪಾಟೀಲರನ್ನು ಕಲಬುರಗಿಗೆ ಕರೆತಂದ ಬಳಿಕ ಅವರ ಮನೆಗೆ ಕರೆದೊಯ್ದು ಶೋಧ ನಡೆಸಿದ ವೇಳೆ 15 ಓಎಂಆರ್ ಶೀಟ್ ಮತ್ತು ಕೆಲ ಅಭ್ಯರ್ಥಿಗಳ ಹಾಲ್​ಟಿಕೆಟ್ ಪತ್ತೆಯಾಗಿದ್ದು, ವಶಪಡಿಸಿಕೊಂಡರು. ಈ ಓಎಂಆರ್ ಶೀಟ್ ಮತ್ತು ಹಾಲ್ ಟಿಕೆಟ್​ಗಳು ಪಿಎಸ್​ಐ ನೇಮಕ ಸೇರಿ ಈ ಹಿಂದೆ ಜರುಗಿದ ಎಫ್​ಡಿಎ, ಎಸ್​ಡಿಎ ಪರೀಕ್ಷೆಗಳದ್ದು ಎಂದು ಗೊತ್ತಾಗಿದೆ.

    ಈ ಹಿಂದಿನ ಎಕ್ಸಾಂಗಳಲ್ಲೂ ಅಕ್ರಮ: ಇತ್ತೀಚೆಗೆ ನಡೆದಿದ್ದ ಲೋಕೋಪಯೋಗಿ ಇಲಾಖೆ ಕಿರಿಯ ಅಭಿಯಂತರ (ಜೆಇ) ಸೇರಿ ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಎಸ್​ಡಿಎ, ಎಫ್​ಡಿಎ, ಹಾಸ್ಟೆಲ್ ವಾರ್ಡನ್ ಇತರ ನೇಮಕ ಪರೀಕ್ಷೆಗಳಲ್ಲಿಯೂ ಆರ್.ಡಿ. ಪಾಟೀಲ್ ಬ್ಲೂಟೂತ್ ಬಳಸಿ ಅಕ್ರಮ ನಡೆಸಿರುವುದು ಬಯಲಾಗಿದೆ. ಆಗ ಯಾವುದೇ ಸೂಕ್ತ ಸಾಕ್ಷಿ ಪೊಲೀಸರಿಗೆ ಸಿಕ್ಕಿರಲಿಲ್ಲ. ಹೀಗಾಗಿ ಬಚಾವ್ ಆಗಿದ್ದರು. ಆದರೆ ಪಿಎಸ್​ಐ ಪರೀಕ್ಷೆಯಲ್ಲಿ ಅಕ್ರಮ ನಡೆಸಿದ್ದರ ಸಾಕ್ಷ್ಯಳು ಸಿಐಡಿಗೆ ಲಭಿಸಿವೆ.

    ಕಡಿಮೆ ಮೊತ್ತಕ್ಕೆ ಗನ್​ಮ್ಯಾನ್​ ಡೀಲ್: ಈ ಅಕ್ರಮದಲ್ಲಿ ಅಫಜಲಪುರ ಶಾಸಕ ಎಂ.ವೈ. ಪಾಟೀಲ್ ಅವರ ಗನ್​ವ್ಯಾನ್ ಆಗಿದ್ದ ಹಯ್ಯಾಳಿ ದೇಸಾಯಿ ಅವರದ್ದೇ ಅತಿ ಕಮ್ಮಿ ಮೊತ್ತಕ್ಕೆ ಆರ್.ಡಿ. ಪಾಟೀಲ್ ಡೀಲ್ ಮಾಡಿದ್ದರಂತೆ. ಹಯ್ಯಾಳಿಗೆ ನೌಕರಿ ಕೊಡಿಸಲು 30 ಲಕ್ಷ ರೂ.ಗೆ ಮಾತುಕತೆ ಆಗಿತ್ತು ಎಂದು ಹೇಳಲಾಗಿದೆ. ಆರ್.ಡಿ. ಸಹೋದರ, ಬಂಧಿತ ಮಹಾಂತೇಶ ಪಾಟೀಲ್​ಗೆ 10 ಲಕ್ಷ ರೂ. ಕೊಟ್ಟಿರುವುದಾಗಿ ಹಯ್ಯಾಳಿ ವಿಚಾರಣೆ ವೇಳೆ ಹೇಳಿದ್ದಾನೆ. ಉಳಿದ ಪ್ರಕರಣಗಳಲ್ಲಿ 60 ಲಕ್ಷಕ್ಕೂ ಅಧಿಕ ಹಣಕ್ಕೆ ಡೀಲ್ ಕುದುರಿಸಲಾಗಿತ್ತು ಎನ್ನುತ್ತವೆ ಮೂಲಗಳು.

    ಪಿಎಸ್​ಐ ನೇಮಕಾತಿ ಅಕ್ರಮದಲ್ಲಿ ಸಿಐಡಿ ತನಿಖೆಯಿಂದ ಹತ್ತಾರು ಅಕ್ರಮ ಹೊರಬೀಳುತ್ತಿವೆ. ಸಮಗ್ರ ತನಿಖೆ ನಡೆಸಲು ಸೂಚಿಸಿದ್ದೇನೆ. ಇದರ ಹಿಂದೆ ಎಷ್ಟೇ ಚಾಣಾಕ್ಷ ಇರಲಿ, ಯಾರೇ ಇರಲಿ ಅವರನ್ನು ಬಂಧಿಸಬೇಕು ಎಂದು ಸೂಚಿಸಿದ್ದೇನೆ. ದಿವ್ಯಾ ಹಾಗರಗಿಯ ಮನೆ, ಸಂಸ್ಥೆ ಎಲ್ಲವನ್ನೂ ಸೀಜ್ ಮಾಡಿದ್ದೇವೆ. ಶೀಘ್ರ ಅವರನ್ನು ಬಂಧಿಸುತ್ತೇವೆ.

    | ಬಸವರಾಜ ಬೊಮ್ಮಾಯಿ ಸಿಎಂ

    ಪಿಎಸ್​ಐ ನೇಮಕಾತಿ ಅಕ್ರಮ ನಡೆದ ಶಿಕ್ಷಣ ಸಂಸ್ಥೆ ಬಿಜೆಪಿ ಮುಖಂಡರೊಬ್ಬರಿಗೆ ಸೇರಿದ್ದು. ಅವರ ಸಂಸ್ಥೆಯಲ್ಲಿ ಕಾಂಗ್ರೆಸ್​ನವರು ಏನು ಮಾಡಲು ಸಾಧ್ಯ?

    | ಸಿದ್ದರಾಮಯ್ಯ, ವಿಧಾನಸಭೆ ಪ್ರತಿಪಕ್ಷ ನಾಯಕ

    ಪಿಎಸ್​ಐ ನೇಮಕಾತಿ ಪರೀಕ್ಷೆ ಅಕ್ರಮ ಹೊರತಂದಿದ್ದೇ ಕಾಂಗ್ರೆಸ್. ಅಕ್ರಮಕ್ಕೆ ಗೃಹ ಮಂತ್ರಿ ಆರಗ ಜ್ಞಾನೇಂದ್ರರೇ ಹೊಣೆ. ತಾನೇನೂ ಮಾಡಿಲ್ಲ ಅಂತ ಅವರು ವಿಧಾನಸಭೆಯಲ್ಲಿ ಏಕೆ ಹೇಳಿದ್ರು? ಈಗ್ಯಾಕೆ ಸಿಐಡಿ ತನಿಖೆಗೆ ಮುಂದಾಗಿದ್ದಾರೆ?

    | ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

    ಎಫ್​ಡಿಎ, ಎಸ್​ಡಿಎ ಗೋಲ್ಮಾಲ್ ಬಯಲು: ಬ್ಲೂಟೂತ್ ಡಿವೈಸ್​ನಿಂದ ವ್ಯವಸ್ಥಿತ ಜಾಲದೊಂದಿಗೆ ರುದ್ರಗೌಡ ಪಾಟೀಲ್ ಗ್ಯಾಂಗ್ ಪರೀಕ್ಷೆ ಅಕ್ರಮ ನಡೆಸುತ್ತಿದೆ. ಈ ಹಿಂದೆ ಹಲವರಿಗೆ ಎಸ್​ಡಿಎ ಮತ್ತು ಎಫ್​ಡಿಎ ನೌಕರಿ ಕೊಡಿಸುವಲ್ಲಿ ಯಶಸ್ಸು ಕಂಡಿದೆ. ಹೈಟೆಕ್ ಡಿವೈಸ್ ಬಳಸಿ ಉತ್ತರ ಕೇಳಿಸಿಕೊಂಡು ಪರೀಕ್ಷೆ ಬರೆದಿದ್ದ ಸುಮಾರು 34 ಜನರಿಗೆ ಸರ್ಕಾರಿ ನೌಕರಿ ಸಿಕ್ಕಿದೆ ಎಂಬ ಅಂಶವೂ ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

    ಹೇಗೆ ನಡೀತಿತ್ತು ಎಕ್ಸಾಂ ಅಕ್ರಮ?

    • ಪರೀಕ್ಷೆಗೆ ಮೊದಲೇ ಪ್ರಶ್ನೆಪತ್ರಿಕೆ ಲೀಕ್
    • ಕೆಲ ಹೊತ್ತಿನಲ್ಲಿ ಪರಿಣತರಿಂದ ಉತ್ತರ ಸಿದ್ಧ
    • ಡೀಲ್ ಕುದುರಿಸಿದ ಅಭ್ಯರ್ಥಿಗಳಿಗೆ ಬ್ಲೂಟೂತ್ ಮೂಲಕ ಬಿ, ಸಿ, ಡಿ ಸೀರಿಸ್ ನೋಡಿ ಉತ್ತರ ಹೇಳಿಸಿ ಮಾರ್ಕ್ ಮಾಡಿಸಲಾಗುತ್ತಿತ್ತು
    • ಹೊರಗಿರುತ್ತಿದ್ದ ತಂಡದವರು ಪ್ರಶ್ನೆಗೆ ಉತ್ತರ ಹೇಳುತ್ತಿದ್ದರಿಂದ ಡೀಲ್ ಆದ ಅಭ್ಯರ್ಥಿಗಳು ಸರಳವಾಗಿ ಉತ್ತರ ಟಿಕ್ ಮಾಡುತ್ತಿದ್ದರು
    • ಯಾರಿಗೂ ಅನುಮಾನ ಬರದಂತೆ ಪರೀಕ್ಷೆ ಪಾಸ್ ಆಗುತ್ತಿದ್ದರು

    ನೇಮಕಾತಿಗೆ ಅಕ್ರಮದ ಗ್ರಹಣ

    | ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

    ರಾಜ್ಯದ 545 ಸಬ್​ಇನ್​ಸ್ಪೆಕ್ಟರ್ ಹುದ್ದೆ ನೇಮಕಾತಿಯಲ್ಲಿನ ಅಕ್ರಮ ದಂಧೆಯಿಂದಾಗಿ ಖಾಲಿ ಹುದ್ದೆಗಳ ನೇಮಕಕ್ಕೆ ಗ್ರಹಣ ಹಿಡಿದಿದೆ. ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಅಧಿಸೂಚನೆ ಅನ್ವಯ ರಾಜ್ಯ ಪೊಲೀಸ್ ಇಲಾಖೆ ಮೊದಲ ಬಾರಿಗೆ ನೇಮಕಾತಿಯಲ್ಲಿ ತೃತೀಯ ಲಿಂಗಿಗಳಿಗೆ ಶೇ.1 ಹುದ್ದೆ ಮೀಸಲಾತಿ ಪ್ರಕಟಿಸಿತ್ತು. 402 ಸಬ್ ಇನ್​ಸ್ಪೆಕ್ಟರ್ ಹುದ್ದೆಗಳಿಗೂ ಅರ್ಜಿ ಆಹ್ವಾನಿಸಲಾಗಿತ್ತು. ಅರ್ಜಿ ಸಲ್ಲಿಸಿದ ಬಳಿಕ ದೇಹದಾರ್ಢ್ಯ ಪರೀಕ್ಷೆ ಮುಗಿದಿದೆ. ಲಿಖಿತ ಪರೀಕ್ಷೆಗೆ ದಿನಾಂಕ ಘೋಷಣೆ ಮಾಡುವ ವೇಳೆಗೆ ನೇಮಕಾತಿಯಲ್ಲಿ ಅಕ್ರಮ ಪ್ರಕರಣ ಬೆಳಕಿಗೆ ಬಂದು ಸ್ಥಗಿತವಾಗಿದೆ. ರಾಜ್ಯ ನ್ಯಾಯ ವಿಜ್ಞಾನ ಪ್ರಯೋಗಾಲಯದಲ್ಲಿ ಖಾಲಿ ಇರುವ ಅಪರಾಧ ಸ್ಥಳ ಪರಿಶೀಲನ ಅಧಿಕಾರಿ (ಸೀನ್ ಆಫ್ ಕ್ರೖೆಂ ಆಫೀಸರ್- ಎಸ್​ಒಸಿಒ) 206 ಹುದ್ದೆಗಳ ಭರ್ತಿ ಮಾಡಲು ಅರ್ಜಿ ಆಹ್ವಾನಿಸಿ 3 ಹುದ್ದೆ ತೃತೀಯ ಲಿಂಗಿಗಳಿಗೆ ಕಾಯ್ದಿರಿಸಲಾಗಿತ್ತು. ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯಲ್ಲಿ (ಕೆಎಸ್​ಐಎಸ್​ಎಫ್) 63 ಸಬ್ ಇನ್​ಸ್ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಈ ಪೈಕಿ 2 ಹುದ್ದೆ ತೃತೀಯ ಲಿಂಗಿಗಳಿಗೆ ಮೀಸಲಾಗಿದೆ.

    ಕರ್ನಾಟಕ ಸಶಸ್ತ್ರ ಮೀಸಲು ಪಡೆ (ಕೆಎಸ್​ಆರ್​ಪಿ) ಮತ್ತು ಇಂಡಿಯನ್ ರಿಸರ್ವ್ ಬೆಟಾಲಿಯನ್ (ಐಆರ್​ಬಿ)ಗಳಲ್ಲಿ ವಿಶೇಷ ಮೀಸಲು ಸಬ್ ಇನ್​ಸ್ಪೆಕ್ಟರ್ 70 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ತೃತೀಯ ಲಿಂಗಿಗಳಿಗೆ 5 ಹುದ್ದೆ ಮೀಸಲಾಗಿವೆ. ಈ ಎಲ್ಲದಕ್ಕೂ ಲಕ್ಷಾಂತರ ಉದ್ಯೋಗ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ದೇಹದಾರ್ಢ್ಯ ಪರೀಕ್ಷೆಗೆ ಕಾಯುತ್ತಿದ್ದಾರೆ. ಆದರೆ, 545 ಎಸ್​ಐ ನೇಮಕಾತಿಯಲ್ಲಿ ಅಕ್ರಮ ಬೆಳಕಿಗೆ ಬಂದಿರುವ ಕಾರಣ ಎಲ್ಲದಕ್ಕೂ ತಡೆ ನೀಡಿ ಪೊಲೀಸ್ ನೇಮಕಾತಿ ವಿಭಾಗ ಸರ್ಕಾರದ ಒಪ್ಪಿಗೆಗಾಗಿ ಕಾಯುತ್ತಿದೆ.

    12 ಹುದ್ದೆ ನಾಲ್ಕೇ ಅರ್ಜಿ: ಇಂಡಿಯನ್ ರಿಸರ್ವ್ ಬೆಟಾಲಿಯನ್ (ಐಆರ್​ಬಿ) ಗಳಲ್ಲಿ ವಿಶೇಷ ಮೀಸಲು ಸಬ್ ಇನ್​ಸ್ಪೆಕ್ಟರ್ 70 ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿತ್ತು. ತೃತೀಯ ಲಿಂಗಿಗಳಿಗೆ 5 ಹುದ್ದೆ ಮೀಸಲಾಗಿವೆ. ಈ ಹುದ್ದೆ ಬಯಸಿ 4 ಅರ್ಜಿ ಸಲ್ಲಿಕೆಯಾಗಿವೆ. ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಕೇಳಲಾಗಿತ್ತು. ಇದೇ ರೀತಿ ಎಫ್​ಎಸ್​ಎಲ್​ನ ಸೀನ್ ಆಫ್ ಕ್ರೖೆಂ ಆಫೀಸರ್, ಕೆಎಸ್​ಐಎಸ್​ಎಫ್ ಪಿಎಸ್​ಐ ಮತ್ತು ಕೆಎಸ್​ಆರ್​ಪಿ ನೇಮಕಾತಿಯಲ್ಲಿ ಸಹ ಮೀಸಲಾತಿ ಕಲ್ಪಿಸಲಾಗಿತ್ತು. ಒಟ್ಟಾರೆ 12 ಹುದ್ದೆಗಳ ಪೈಕಿ 4 ಅರ್ಜಿ ಮಾತ್ರ ಸಲ್ಲಿಕೆಯಾಗಿವೆ.

    4 ಸಾವಿರ ಕಾನ್​ಸ್ಟೆಬಲ್ ಹುದ್ದೆ: ನಾಲ್ಕು ಸಾವಿರ ಕಾನ್​ಸ್ಟೆಬಲ್ (ಸಿವಿಎಲ್) ಹುದ್ದೆಗಳ ನೇಮಕಾತಿಗೆ ಶೀಘ್ರ ಅರ್ಜಿ ಆಹ್ವಾನಿಸಿ 2022ರಲ್ಲಿಯೇ ನೇಮಕಾತಿ ಪೂರ್ಣ ಮಾಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ, ಸಿಐಡಿ ತನಿಖೆಯಿಂದಾಗಿ ಅರ್ಜಿ ಆಹ್ವಾನ ಮಾಡಲು ಅಡ್ಡಿಯಾಗಿದೆ.

    ಸರ್ಕಾರಿ ನೌಕರಿ ಬಗ್ಗೆ ಮಾಹಿತಿ ಕೊರತೆಯಿದೆ. ಕೆಲವರಿಗೆ ವಿದ್ಯಾರ್ಹತೆ, ದೇಹದಾರ್ಢ್ಯತೆ ಇರುವುದಿಲ್ಲ. ಇತ್ತೀಚೆಗೆ ಮೀಸಲಾತಿ ಲಭಿಸಿರುವುದರಿಂದ ತಯಾರಿಗೆ ಅವಕಾಶ ಸಿಕ್ಕಿದೆ. ಮುಂದೆ ಎಲ್ಲ ಹುದ್ದೆಗಳಿಗೂ ತೃತೀಯ ಲಿಂಗಿಗಳು ಅರ್ಹತೆ ಪಡೆಯುವ ವಿಶ್ವಾಸವಿದೆ.

    |ಬಿ.ಮಂಜಮ್ಮ ಜೋಗತಿ– ಜಾನಪದ ಅಕಾಡಮಿ ಅಧ್ಯಕ್ಷೆ

    545 ಎಸ್​ಐ ನೇಮಕಾತಿ ಪ್ರಕರಣದ ಸಿಐಡಿ ತನಿಖೆ ಪೂರ್ಣಗೊಂಡ ಮೇಲೆ 402 ಪಿಎಸ್​ಐ ಹುದ್ದೆಗಳ ನೇಮಕಕ್ಕೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ.

    |ಪ್ರವೀಣ್ ಸೂದ್-ರಾಜ್ಯ ಪೊಲೀಸ್ ಮಹಾನಿರ್ದೇಶಕ

    ತೃತೀಯ ಲಿಂಗಿಗಳಿಗೆ ಪೊಲೀಸ್ ನೇಮಕಾತಿಯಲ್ಲಿ ಮೀಸಲಾತಿಯಿದೆ. ವಿದ್ಯಾರ್ಹತೆ ಇಲ್ಲದ ಕಾರಣ ಅರ್ಜಿ ಸಲ್ಲಿಸಲು ಹಿನ್ನೆಡೆಯಾಗಿದೆ.

    |ಅಮ್ರಿತ್ ಪಾಲ್– ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ

    ಬೆಡ್​ ರೂಮಲ್ಲಿ ಎಲೆಕ್ಟ್ರಿಕ್​​ ಸ್ಕೂಟರ್​ನ ಬ್ಯಾಟರಿ ಸ್ಫೋಟ: ಪತಿ ಸಾವು, ಪತ್ನಿ ಸ್ಥಿತಿ ಚಿಂತಾಜನಕ… ಸ್ಕೂಟರ್​ ಖರೀದಿಸಿದ ಮರುದಿನವೇ ದುರಂತ

    ತುಮಕೂರು ಎಸ್​ಪಿ ಸರ್​, ಪ್ಲೀಸ್​ ನೀವೆ ನಮ್ಗೆ ದಾರಿ ತೋರ್ಸಿ… ಮನೆ ಮಾಲೀಕನ ಸಾಲಕ್ಕೆ ಕಂಗಾಲಾದ 35 ಕುಟುಂಬ

    ಇಂಡಿಯಾ ಟ್ರೆಂಡಿಂಗ್​ನಲ್ಲಿ #DrRajkumar; ಡಾ.ರಾಜ್​ಗೆ ಜನ್ಮದಿನದ ಶುಭಾಶಯಗಳ ಸುರಿಮಳೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts