ಗಂಡಸ್ತನ ಪದ ಬಳಸಿದ್ದಕ್ಕೆ ಕ್ಷಮೆ ಕೋರುವೆ... ಎನ್ನುತ್ತಲೇ ಸರ್ಕಾರಕ್ಕೆ 1 ತಿಂಗಳ ಗಡುವು ಕೊಟ್ಟ ಎಚ್​ಡಿಕೆ!

hdk
Published on

ಬೆಂಗಳೂರು: "ಆವೇಶದಲ್ಲಿ ಸಿಎಂಗೆ ಗಂಡಸ್ತನ ಪದ ಬಳಕೆ ಮಾಡಿದೆ. ಯಾರೂ ಅನ್ಯತಾ ಭಾವಿಸಬೇಡಿ" ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ವಿಷಾದ ವ್ಯಕ್ತಪಡಿಸಿದ್ದಾರೆ.

ಗುರುವಾರ ಬೆಳಗ್ಗೆ ಚನ್ನಪಟ್ಟಣದಲ್ಲಿ ಮಾತನಾಡಿದ್ದ ಎಚ್​ಡಿಕೆ ರಾಜ್ಯ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು. "ಇಂತಹದ್ದನ್ನೆಲ್ಲ ಉತ್ತರ ಪ್ರದೇಶದಲ್ಲಿ ಇಟ್ಟುಕೊಳ್ಳಿ, ಶಾಂತಿಪ್ರಿಯ ನಾಡಲ್ಲಿ ಕೋಲಾಹಲ ಎಬ್ಬಿಸಬೇಡಿ" ಎನ್ನುತ್ತಲೇ ಸಿಎಂ ಬಸವರಾಜ ಬೊಮ್ಮಾಯಿಗೆ ಗಂಡಸ್ತನದ ಸವಾಲ್ ಹಾಕಿದ್ದರು. "ಈ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ರೆ.. ಬೊಮ್ಮಾಯಿ ಅವರೇ ನಿಮಗೆ ಗಂಡಸ್ತನ ಇದ್ರೆ ಮೊದಲು ಹಲಾಲ್- ವ್ಯಾಪಾರದಲ್ಲೂ ಧರ್ಮ ಸಂಘರ್ಷವನ್ನ ತಡೆಯಿರಿ. ಈ ವಿವಾದ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದ್ದರೂ ತಮಗೆ ಏನೂ ಗೊತ್ತೇ ಇಲ್ಲಾ ಅನ್ನೊ ರೀತಿ ಇದ್ರೆ ಏನ್ ಅರ್ಥ?" ಎಂದು ಆಕ್ರೋಶ ಹೊರಹಾಕಿದ್ದರು. ಗಂಡಸ್ತನ ಪದ ಬಳಸಿದ ಎಚ್​ಡಿಕೆ ವಿರುದ್ಧ ಬಿಜೆಪಿಯವರಿಂದ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಎಚ್​ಡಿಕೆ, "ಎರಡು ತಿಂಗಳಲ್ಲಿ ಸರ್ಕಾರ ಏನು ಮಾಡಿಲ್ಲ. ಅದಕ್ಕೆ ಆಕ್ರೋಶದಲ್ಲಿ ಆ ಪದ ಬಳಕೆ ಮಾಡಿದ್ದೇನೆ. ಸರ್ಕಾರ ಮೌನವಾಗಿ ಇದ್ದದ್ದಕ್ಕೆ ಈ ವಿವಾದ ಇಷ್ಟು ದೊಡ್ಡದು ಆಗಿದೆ. ಮಾತನಾಡುವ ಭರದಲ್ಲಿ ಗಂಡಸ್ತದ ಬಗ್ಗೆ ಹೇಳಿದ್ದೇನೆ. ನನ್ನ ಪದಬಳಕೆಯಿಂದ ನೋವಾಗಿದ್ರೆ ಸಾರ್ವಜನಿಕವಾಗಿ ವಿಷಾದ ವ್ಯಕ್ತಪಡಿಸುತ್ತೇನೆ" ಎಂದರು.

"ಸರ್ಕಾರಕ್ಕೆ ಒಂದು ತಿಂಗಳ ಕಾಲಾವಕಾಶ ನೀಡುತ್ತೇನೆ. ಅಷ್ಟರಲ್ಲಿ ಇದೆಲ್ಲ ಸರಿಪಡಿಸಬೇಕು. ನಿಮ್ನ ಹಿಡನ್ ಅಜೆಂಡಾ ಬಿಟ್ಟು ಸರ್ವ ಜನಾಂಗದ ಶಾಂತಿಯ ತೋಟವನ್ನು ಉಳಿಸಿ. ಸರ್ಕಾರ ಮೌನ ಮುರಿದು ನಿರ್ಧಾರ ಮಾಡಲಿ" ಎಂದು ಎಚ್​ಡಿಕೆ ಗಡುವು ನೀಡಿದರು. "ಜಟ್ಕಾ, ಹಲಾಲ್ ಗೊಂದಲ ಬಗೆಹರಿಸದಿದ್ದರೆ ರಾಜ್ಯದಲ್ಲಿ ಮತ್ತೊಮ್ಮೆ ಚಳವಳಿ ಆರಂಭ ಆಗುತ್ತೆ" ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net