

ಮೈಸೂರು: ರಾಮನಗರ ಜಿಲ್ಲೆಯನ್ನಾಗಿ ಮಾಡಿದ್ದು ನಾನು. ಜಿಲ್ಲೆಯ ಅಭಿವೃದ್ಧಿ ಮಾಡಿದ್ದು ನಾನು. ಆದರೆ, ಅವರು ವೇದಿಕೆ ಮೇಲೆ ಕಿತ್ತಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಲೇವಡಿ ಮಾಡಿದರು.
ರಾಮನಗರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಸಿಎಂ ಬಸವರಾಜು ಬೊಮ್ಮಾಯಿ ಸಮ್ಮುಖದಲ್ಲಿ ನಡೆಯುತ್ತಿದ್ದ ಕಾರ್ಯಕ್ರದಲ್ಲಿ ಅಭಿವೃದ್ಧಿ ವಿಚಾರವಾಗಿ ಸಚಿವ ಅಶ್ವತ್ಥ ನಾರಾಯಣ್ ಮತ್ತು ಸಂಸದ ಡಿ.ಕೆ. ಸುರೇಶ್ ಕಿತ್ತಾಡಿಕೊಂಡಿದ್ದರು. ಗಂಡಸ್ತನ ಸೋರಿಸು ಬಾ ಎಂಬೆಲ್ಲ ಮಾತು ಶುರುವಾಗಿ ಇಡೀ ಕಾರ್ಯಕ್ರಮದಲ್ಲಿ ನಾನಾ? ನೀನಾ? ಎಂದು ಸಿಎಂ ಎದುರಲ್ಲೇ ಗಲಾಟೆ ಮಾಡಿಕೊಂಡಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಎಚ್ಡಿಕೆ, ರಾಮನಗರ ಜಿಲ್ಲೆಯನ್ನು ಅಭಿವೃದ್ಧಿ ಮಾಡಿದ್ದು ನಾನು. ಆದ್ರೆ ಅವರು ಕಿತ್ತಾಡ್ತಾ ಇದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದಾಗ 2016ರಲ್ಲಿ ರಾಜೀವ್ ಗಾಂಧಿ ಹೆಲ್ತ್ ಯೂನಿರ್ವಸಿಟಿಗೆ ಅನುಮೋದನೆ ಮಾಡಿದ್ದೆ. ರಾಮನಗರ ಜಿಲ್ಲೆಗೆ ನರ್ಸಿಂಗ್ ಮೆಡಿಕಲ್ ಕಾಲೇಜು ಮಂಜೂರು ಮಾಡಿದ್ದೆ. 360 ಕೋಟಿ ರೂಪಾಯಿ ಅನುದಾನವನ್ನೂ ಬಿಡುಗಡೆ ಮಾಡಿದ್ದೆ. ನಮ್ಮ ಸರ್ಕಾರ ಇಳಿಯುತ್ತಿದ್ದಂತೆಯೇ ಎಲ್ಲವನ್ನೂ ನಿಲ್ಲಿಸಿಬಿಟ್ರು ಎಂದು ಅಸಮಾಧಾನ ಹೊರಹಾಕಿದರು.
8 ವರ್ಷ ಬಿಜೆಪಿ ಸರ್ಕಾರ ಅಧಿಕಾರ ಮಾಡಿದೆ. 5 ವರ್ಷ ಕಾಂಗ್ರೆಸ್ ಸರ್ಕಾರ ಇತ್ತು. ಅವರಿಬ್ಬರೂ ಏನು ಮಾಡಿದ್ರು? ನಾನು ಅನುಮೋದನೆ ಮಾಡಿದ್ದ ಆಸ್ಪತ್ರೆಯನ್ನು ರಾಮನಗರ ಜಿಲ್ಲೆಯಲ್ಲಿ ಕಟ್ಟಿಸಿದ್ದರೆ ಕೋವಿಡ್ ಸಂದರ್ಭದಲ್ಲಿ ಎಷ್ಟೊಂದು ಜನರ ಪ್ರಾಣ ಉಳಿಸಬಹುದಿತ್ತು ಎಂದು ಕಾಂಗ್ರೆಸ್ ಮತ್ತು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.
ಬಂಡೆಗಳನ್ನೇ ಜೀರ್ಣಿಸಿಕೊಂಡವರಿಗೆ ಟೀಕೆಗಳನ್ನು ಜೀರ್ಣಿಸಿಕೊಳ್ಳುವುದು ಯಾವ ಲೆಕ್ಕ? ನೀವು ರಾಮನಗರ ಜಿಲ್ಲೆಯ ಕಲ್ಲು ಬಂಡೆಗಳನ್ನೇ ಜೀರ್ಣಿಸಿಕೊಂಡವರು. ಮೇಕೆದಾಟು ಯೋಜನೆಗೆ ಡಿಪಿಆರ್ ಮಾಡಿಸಿದವನು ನಾನು. ಗಡ್ಕರಿ ಅವರಿಗೆ ಡಿಪಿಆರ್ ಸಲ್ಲಿಸಿ ಅನುಮೋದನೆ ಪಡೆದುಕೊಂಡವನು ನಾನು. ಆಗ ನೀವು ನನ್ನೊಟ್ಟಿಗೆ ದೆಹಲಿಗೆ ಬಂದಿದ್ರಾ? ರಾಜಕೀಯ ಲಾಭಕ್ಕಾಗಿ ಈಗ ಪಾದಯಾತ್ರೆ ಹೊರಟ್ಟಿದ್ದೀರಿ. ನಾನು ನಿಮ್ಮ ವಿಡಿಯೋಗಳನ್ನು ನೋಡಿದ್ದೇನೆ. ಮದುವೆಗೂ ಮುನ್ನ ಗಂಡು-ಹೆಣ್ಣು ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸ್ತಾರೆ. ನೀವು ಪ್ರೀ ಪಾದಯಾತ್ರೆ ಫೋಟೋ ಶೂಟ್ ಮಾಡಿಸಿದ್ದೀರಿ. ಚಾಮರಾಜನಗರದಿಂದ ಕಬ್ಬಿನ ಜ್ಯೂಸ್ ಬರಬೇಕಂತೆ. ಭಾಗವಹಿಸಿದವರಿಗೆ ಸರ್ಟಿಫಿಕೇಟ್ ಕೊಡ್ತಾರಂತೆ. ನಿಮ್ಮ ಹೈಟೆಕ್ ಪಾದಯಾತ್ರೆಯನ್ನು ಜನರು ಗಮನಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಚುನಾವಣೆಗೆ ಇನ್ನೂ ಟೈಮ್ ಇದೆ, ಯಾಕಿಷ್ಟು ಆತುರ? ಮೇಕೆದಾಟು ಪಾದಯಾತ್ರೆಯಂತಹ ನೂರು ಯಾತ್ರೆ ಮಾಡಲಿ. ನನಗೇನೂ ಆತಂಕ ಇಲ್ಲ. ಆದರೆ ಒಮಿಕ್ರಾನ್‌ನಂತಹ ಪರಿಸ್ಥಿತಿಯಲ್ಲಿ ಇದೆಲ್ಲ ಬೇಕಿತ್ತಾ? ಇವರು ಪಾದಯಾತ್ರೆ ಸಕ್ಸಸ್ ಮಾಡ್ತಾರೋ, ಸರ್ಕಾರದವರು ತಡೀತಾರೋ ಗೊತ್ತಿಲ್ಲ. ಇದು ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಬಿಟ್ಟ ವಿಚಾರ. ಆದರೆ ಜನಸಾಮಾನ್ಯರ ಬಗ್ಗೆ ಕಾಳಜಿ ತೋರಿಸಿ. ನಿಮ್ಮ ಪ್ರತಿಷ್ಠೆಗಳಿಗೆ ಜನರನ್ನು ಬಲಿ ಕೊಡಬೇಡಿ ಎಂದು ಕಿವಿಮಾತು ಹೇಳಿದರು.