

ಮೈಸೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸ್ತಾರೆ? ಎಂಬ ಪ್ರಶ್ನೆಗೆ ರಾಮನಗರ ಇಲ್ಲವೇ ಚನ್ನಪಟ್ಟಣ ಕ್ಷೇತ್ರ ಎಂದು ಥಟ್ ಅಂತ ಜನರು ಪ್ರತಿಕ್ರಿಯಿಸುತ್ತಿದ್ದರು. ಆದರೀಗ ಚಾಮುಂಡೇಶ್ವರಿ ಕ್ಷೇತ್ರಕ್ಕೆ ನಾನೇ ಬರುವೆ ಎನ್ನುವ ಮೂಲಕ ಎಚ್ಡಿಕೆ ಭಾರೀ ಕುತೂಹಲ ಮೂಡಿಸಿದ್ದಾರೆ.
ಮುಂದಿನ ಚುನಾವಣೆಗೆ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಯಾರು ಬರ್ತಾರೆ ಎಂದು ಕೇಳಿದ ಕಾರ್ಯಕರ್ತರಿಗೆ ನಾನೇ ಬರುವೆ ಎನ್ನುವ ಮೂಲಕ ಚಾಮುಂಡೇಶ್ವರಿ ಕ್ಷೇತ್ರದ ರಾಜಕಾರಣಕ್ಕೆ ಎಚ್ಡಿಕೆ ಟ್ವಿಸ್ಟ್ ಕೊಟ್ಟಿದ್ದಾರೆ.
ಮೈಸೂರು ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್ಡಿಕೆ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಯಾರು ರ್ಬತಾರೆ ಎಂದು ಕಾರ್ಯಕರ್ತರು ಕೇಳುತ್ತಿದ್ದಾರೆ. ನಾನೇ ಈ ಕ್ಷೇತ್ರಕ್ಕೆ ಬರುವುದಾಗಿ ಹೇಳಿರುವೆ ಎಂದು ತಿಳಿಸಿ ಅಚ್ಚರಿ ಮೂಡಿಸಿದರು.
ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿರುವ ಶಾಸಕ ಜಿ.ಟಿ.ದೇವೇಗೌಡರನ್ನು ಹಣಿಯಲು ಎಚ್ಡಿಕೆ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ. ಒಕ್ಕಲಿಗ ಪ್ರಾಬಲ್ಯದ ಕ್ಷೇತ್ರದಲ್ಲಿ ನಾಯಕ ಸಮುದಾಯಯೂ ಕೈಹಿಡಿಯುವ ವಿಶ್ವಾಸ ಇದೆ. ಆದರೆ ಜಿಟಿಡಿ- ಸಿದ್ದರಾಮಯ್ಯ ಒಂದಾದರೆ ಗೆಲುವು ಕಷ್ಟ ಎಂಬ ಮಾತೂ ಕೇಳಿಬರುತ್ತಿದೆ. ಚುನಾವಣೆಗೆ ಇನ್ನೂ ಒಂದು ವರ್ಷ ಇದೆ. ಆಗಲೇ ಕ್ಷೇತ್ರದಲ್ಲಿ ರೋಚಕತೆ ಪಡೆದುಕೊಳ್ಳುತ್ತಿದೆ.