

ಬಳ್ಳಾರಿ: ಕೋವಿಡ್ನಿಂದಾಗಿ 2 ವರ್ಷಗಳಿಂದ ಸ್ಥಗಿತವಾಗಿದ್ದ ಗುಂತಕಲ್- ಬಳ್ಳಾರಿ- ಚಿಕ್ಕಜಾಜೂರು ನಿತ್ಯದ ಪ್ಯಾಸೆಂಜರ್ ರೈಲನ್ನು ಜು.20 ರಿಂದ ಆರಂಭಿಸುವುದಾಗಿ ಸಿಕಂದರಾಬಾದ್ನ ದಕ್ಷಿಣ ಮಧ್ಯ ರೈಲ್ವೆಯ ಸಿಪಿಟಿಯಂ ಕೆ.ಮಣಿಕುಮಾರ್ ತಿಳಿಸಿದ್ದಾರೆ ಎಂದು ರಾಜ್ಯ ರೈಲ್ವೆ ಕ್ರಿಯಾ ಕೆ.ಎಂ.ಮಹೇಶ್ವರಸ್ವಾಮಿ ಮಾಹಿತಿ ನೀಡಿದ್ದಾರೆ.
ಗುಂತಕಲ್- ಚಿಕ್ಕಜಾಜೂರು- ಗುಂತಕಲ್, ಹುಬ್ಬಳ್ಳಿ- ತಿರುಪತಿ, ಹುಬ್ಬಳ್ಳಿ- ಕೊಲ್ಲಾಪುರ- ಮನುಗೂರು ಈ ಮೂರು ರೈಲುಗಳು ಸಿಕಂದರಾಬಾದ್ನ ದಕ್ಷಿಣ ಮಧ್ಯ ರೈಲುಗಳಾಗಿದ್ದು, ಕೂಡಲೇ ರೈಲುಗಳ ಆರಂಭಿಸಲು ಒತ್ತಡ ತರುವಂತೆ ಇತ್ತೀಚೆಗೆ ಹುಬ್ಬಳ್ಳಿ ನೈರುತ್ಯ ರೈಲ್ವೆ ವಲಯದ ಅಧಿಕಾರಿಗಳನ್ನು ಭೇಟಿಯಾಗಿ ಒತ್ತಾಯಿಸಲಾಗಿತ್ತು. ಕೋರಿಕೆಯಂತೆ ಗುಂತಕಲ್ನಿಂದ ಚಿಕ್ಕಜಾಜೂರು ಕಡೆಗೆ ರೈಲಿನ ಸಂಚಾರ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.
ಬೆಳಗ್ಗೆ 7.40ಕ್ಕೆ ಗುಂತಕಲ್ನಿಂದ ಹೊರಡುವ ಈ ರೈಲು ಮಧ್ಯಾಹ್ನ 1.10ಕ್ಕೆ ಚಿಕ್ಕಜಾಜೂರು ತಲುಪಲಿದೆ. ಅಲ್ಲಿಂದ ರಾತ್ರಿ 9.05ಕ್ಕೆ ಗುಂತಕಲ್ ತಲುಪಲಿದೆ. ಇದು ಪ್ಯಾಸೆಂಜರ್ ರೈಲಾಗಿದ್ದು, ಗುಂತಕಲ್, ಬಂಟಿನಹಾಳ್, ಗುಮ್ಮನೂರು, ಬೇವಿನಹಾಳ್, ಸಾಕಿಬಂಡೆ, ವೀರಾಪುರ, ಹಗರಿ, ಹದ್ದಿನಗುಂಡು, ಬಳ್ಳಾರಿ, ಓಬಳಾಪುರಂ, ಸೋಮಲಾಪುರಂ, ರಾಯದುರ್ಗ, ಮೊಳಕಾಲ್ಮೂರು, ಬಿ.ಜಿ.ಕೆರೆ, ತಳಕು, ಚಳ್ಳಕೆರೆ, ಬಲ್ಲೇನಹಳ್ಳಿ, ಚಿತ್ರದುರ್ಗ, ಹುಲಿಯೂರು, ಬೆಟ್ಟದ ನಾಗೇನಹಳ್ಳಿ, ಅಮೃತಪುರ, ಚಿಕ್ಕನಂದವಾಡಿ ಮುಖೇನ ಸಂಚರಿಸಿ ಚಿಕ್ಕಜಾಜೂರು ತಲುಪಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.