

ತುಮಕೂರು: ಅತಿಥಿ ಉಪನ್ಯಾಸಕರಿಗೆ ವೇತನವನ್ನು ಹೆಚ್ಚಿಸುವ ನೆಪದಲ್ಲಿ ಅರ್ಧದಷ್ಟು ಶಿಕ್ಷಕರಿಗೆ ನಿರುದ್ಯೋಗಿಳನ್ನಾಗಿ ಮಾಡಿ ಈವರೆಗೂ ಕರ್ತವ್ಯ ನಿರ್ವಹಿಸಿರುವ ಅತಿಥಿ ಉಪನ್ಯಾಸಕರನ್ನು ಸಾವಿನ ದವಡೆಗೆ ತಳ್ಳಿದೆ. ಅದಕ್ಕಾಗಿ ಎಲ್ಲಾ ಉಪನ್ಯಾಸಕರು ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದಾರೆ. ಅಲ್ಲದೆ, ತುಮಕೂರಿನಲ್ಲಿ ನೇಣಿನ ಕುಣಿಕೆ ಪ್ರದರ್ಶಿಸಿ ಪ್ರತಿಭಟನೆಯನ್ನು ತೀವ್ರಗೊಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಕಳೆದ 22 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ಅತಿಥಿ ಉಪನ್ಯಾಸಕರು ಹೋರಾಟ ಮುಂದುವರಿಸಿದ್ದು, ವೇತನ ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರವು 8 ಗಂಟೆಗಳ ಕಾರ್ಯಾಭಾರವನ್ನು 15 ಗಂಟೆಗಳಿಗೆ ಹೆಚ್ಚಿಸುವ ಮೂಲಕ ಸುಮಾರು 7500 ಸಾವಿರ ಅತಿಥಿ ಉಪನ್ಯಾಸಕರಿಗೆ ಕೆಲಸವಿಲ್ಲದಂತೆ ಮಾಡಿದೆ. ಇದು ರಾಜ್ಯ ಸರ್ಕಾರದ ಸಂವಿಧಾನ ವಿರೋಧಿ ಧೋರಣೆಯಾಗಿದ್ದು ಸರ್ಕಾರದ ಈ ಆದೇಶವು ಮರಣಶಾಸನವಾಗಿದ್ದು ದಯಾ ಮರಣಕ್ಕೆ ಅವಕಾಶ ಕೋಡುವಂತೆ ರಾಷ್ಟ್ರಪತಿಗಳಿಗೆ ಪತ್ರ ಬರೆದು ಪ್ರತಿಭಟನಾನಿರತರು ಪೋಸ್ಟ್ ಮಾಡಿದರು.
ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ತಾವು ಯಾವುದೇ ಒತ್ತಡಕ್ಕೆ ಬಗ್ಗುವುದಿಲ್ಲ ಎಂದಿದ್ದಾರೆ. ಪ್ರಜಾಸತಾತ್ಮಕ ಹೋರಾಟಗಳಿಗೆ ಮಣಿಯದ ಸರ್ಕಾರಗಳೇ ಇಲ್ಲ. ನಮ್ಮ ಮುಂದೆಯೇ ಹಲವಾರು ಉದಾಹರಣಗಳಿವೆ. ಅಲ್ಲದೆ, ಅತಿಥಿ ಉಪನ್ಯಾಸಕರು ತಮ್ಮ ಶಕ್ತಿ ಪ್ರದರ್ಶನಕ್ಕೆ ಬಂದಿಲ್ಲ. ನ್ಯಾಯಯುತ ಬೇಡಿಕೆಗಳಿಗಾಗಿ ಧರಣಿ ನಡೆಸುತ್ತಿದ್ದೇವೆ. ಸರ್ಕಾರ ಕೂಡಲೇ ಸ್ಪಂದಿಸದಿದ್ದರೆ, ಮುಂದಿನ ದಿನಗಳಲ್ಲಿ ಸಿಎಂ ಮನೆಗೆ ಮುತ್ತಿಗೆ ಹಾಕುವಂತಹ ಹೋರಾಟಕ್ಕೂ ನಾವು ಹಿಂಜರಿಯುವುದಿಲ್ಲ ಎಂಬುದನ್ನು ಸರ್ಕಾರ ಅರಿತುಕೊಳ್ಳಬೇಕಿದೆ ಎಂದು ಜಿ.ಕೆ.ನಾಗಣ್ಣ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಡಾ.ಶಿವಣ್ಣ ತಿಮ್ಮಲಾಪುರ, ಮಂಜಣ್ಣ, ಡಾ.ಕುಮಾರ್, ರಂಗಧಾಮಯ್ಯ, ಗಂಗಾಂಬಿಕೆ, ಗುಡ್ಡಣ್ಣ, ಅಂಬಿಕಾ, ಸುನಿಲ್, ಹರೀಶ್, ಸುನಿಲ್ ಕುಮಾರ್, ಡಾ.ರಮೇಶ್, ರಾಧಾಮಣಿ, ಪುಷ್ಪಲತಾ ಪಾಲ್ಗೊಂಡಿದ್ದರು.