ಹನುಮಂತನಗರದಲ್ಲಿ ಅದ್ದೂರಿ ತೆಪ್ಪೋತ್ಸವ

12KMD-1
Published on

ಕೆ.ಎಂ.ದೊಡ್ಡಿ: ಸಮೀಪದ ಹನುಮಂತನಗರದ ಶ್ರೀ ಆತ್ಮಲಿಂಗೇಶ್ವರ ದೇವಾಲಯದಲ್ಲಿ ಶಿವರಾತ್ರಿ ಅಂಗವಾಗಿ ಪ್ರಥಮ ಬಾರಿಗೆ ತೆಪ್ಪೋತ್ಸವ ಸೋಮವಾರ ರಾತ್ರಿ ಅದ್ದೂರಿಯಾಗಿ ಜರುಗಿತು.


ಕಳೆದ ನಾಲ್ಕು ದಿನಗಳಿಂದ ಶಿವರಾತ್ರಿ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಸಾಂಗವಾಗಿ ಜರುಗಿದವು. ಈ ವೇಳೆ ಸೋಮವಾರ ಸಂಜೆ ದೇವಾಲಯ ಅಭಿವೃದ್ಧಿ ಸಮಿತಿ ವತಿಯಿಂದ ಪಾವನ ಗಂಗೆಯ ಕಲ್ಯಾಣಿಯಲ್ಲಿ ತೆಪ್ಪೋತ್ಸವ ವೈಭವದಿಂದ ನೆರವೇರಿತು.
ದೇವಾಲಯದಲ್ಲಿ ಶಿವ-ಪಾರ್ವತಿ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಉತ್ಸವ ಮೂತಿಯನ್ನು ಮಂಗಳವಾದ್ಯದೊಂದಿಗೆ ಪಾವನ ಗಂಗೆಯ ಕಲ್ಯಾಣಿ ಬಳಿ ತರಲಾಯಿತು.


ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು. ಭಾರತೀ ಎಜುಕೇಷನ್ ಟ್ರಸ್ಟ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಶಯ್ ಮಧು ದೀಪ ಬೆಳಗುವ ಮೂಲಕ ತೆಪ್ಪೋತ್ಸವಕ್ಕೆ ಚಾಲನೆ ನೀಡಿದರು.


ಕಲ್ಯಾಣಿಯನ್ನು ವಿದ್ಯುದ್ದೀಪಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ತೆಪ್ಪದ ವಿಶೇಷ ಅಲಂಕಾರ ಭಕ್ತರ ಗಮನ ಸೆಳೆಯಿತು.
ತೆಪ್ಪವನ್ನು ಕಲ್ಯಾಣಿಯಲ್ಲಿ ಮೂರು ಸುತ್ತು ಪ್ರದಕ್ಷಿಣೆ ಹಾಕಿದ ನಂತರ ಕಲ್ಯಾಣಿಯ ಮಧ್ಯಭಾಗದಲ್ಲಿ ಭಾರತೀನಗರದ ಶ್ರೀಚಾಮುಂಡೇಶ್ವರಿ ದೇವಾಲಯದ ಪ್ರಧಾನ ಅರ್ಚಕ ಕಾರ್ತಿಕ್ ಆರಾಧ್ಯ ಗಂಗಾರತಿ ಬೆಳಗಿದರು.


ಬಳಿಕ ದೇವಾಲಯ ಪ್ರಾಂಗಣದಲ್ಲಿ ಭಾರತೀ ಸ್ಕೂಲ್ ಆಫ್ ಎಕ್ಸಲೆನ್ಸ್ ವಿದ್ಯಾರ್ಥಿನಿಯರು ಪ್ರದರ್ಶಿಸಿದ ಭರತನಾಟ್ಯ ಭಕ್ತರ ಗಮನ ಸೆಳೆಯಿತು.
ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಮಾತನಾಡಿ, 32 ವರ್ಷಗಳ ಹಿಂದೆ ನನ್ನ ತಂದೆ, ಮಾಜಿ ಸಂಸದ ದಿವಂಗತ ಜಿ.ಮಾದೇಗೌಡ ಅವರು ಹನುಮಂತನಗರವನ್ನು ಒಂದು ಆಧ್ಯಾತ್ಮಿಕ ಕ್ಷೇತ್ರವನ್ನು ನಿರ್ಮಾಣ ಮಾಡಲು ಪಣತೊಟ್ಟಿದ್ದು, ಅವರ ಕನಸು ಈಡೇರಿದೆ. ದೇವಾಲಯಕ್ಕೆ ಹೆಚ್ಚು ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾಗಲಿ ಎಂಬ ದೃಷ್ಟಿಯಿಂದ ನನ್ನ ಪುತ್ರ ಆಶಯ್‌ಮಧು ತೆಪ್ಪೋತ್ಸವದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ಯಶಸ್ವಿಯಾಗಿ ನಡೆಯಲು ಕಾರಣರಾಗಿದ್ದಾರೆ ಎಂದರು.


ಭಾರತೀ ಎಜುಕೇಷನ್ ಟ್ರಸ್ಟ್ ಮುಖ್ಯ ಕಾರ್ಯನಿರ್ವಣಾಧಿಕಾರಿ ಆಶಯ್ ಮಧು, ಕಾರ್ಯದರ್ಶಿಗಳಾದ ಬಿ.ಎಂ.ನಂಜೇಗೌಡ, ಗುರುದೇವರಹಳ್ಳಿ ಸಿದ್ದೇಗೌಡ, ಟ್ರಸ್ಟಿಗಳಾದ ಎಸ್.ಜಯರಾಮು, ಮುದ್ದಯ್ಯ, ಭಾರತೀ ಹೆಲ್ತ್ ಸೈನ್ಸ್ ನಿರ್ದೇಶಕ ಡಾ.ತಮಿಜ್‌ಮಣಿ, ಪ್ರಾಂಶುಪಾಲರಾದ ಡಾ.ಎಸ್.ಎಲ್.ಸುರೇಶ್, ಸಿ.ವಿ.ಮಲ್ಲಿಕಾರ್ಜುನ ಮತ್ತಿತರರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net