ಏಳುಕೂಟ ದೇವರ ಅದ್ದೂರಿ ಮೆರವಣಿಗೆ

02,kkr2(5-24
Published on

ಕಿಕ್ಕೇರಿ: ಸಮೀಪದ ಕುಂದೂರು ಗ್ರಾಮದಲ್ಲಿ ಗುರುವಾರ ಸಂಜೆ ಏಳುಕೂಟ ದೇವರ ಮೆರವಣಿಗೆ ಅದ್ದೂರಿಯಾಗಿ ನೆರವೇರಿತು.


ಗ್ರಾಮದ ಮೂಲಸ್ಥಾನ ರಂಗಬೀದಿಯಿಂದ ವೀರಭದ್ರೇಶ್ವರ, ಬೀರೇಶ್ವರ, ಮೈಲಾರಲಿಂಗೇಶ್ವರ, ಸಂಪಿಗೆರಾಯ, ಸಾನಳ್ಳಿರಾಯ, ಬಾಣೇಶ್ವರ, ಈರಿಕೆ ಬಸವ ಸೇರಿದಂತೆ ಏಳುಕೂಟ ದೇವರ ಮೆರವಣಿಗೆಗೆ ಗ್ರಾಮಸ್ಥರು ಸಜ್ಜಾದರು. ಉತ್ಸವ ಮೂರ್ತಿಗಳಿಗೆ ಪುಷ್ಪ, ವಸ್ತ್ರಗಳಿಂದ ಅಲಂಕರಿಸಲಾಯಿತು. ದೇವರುಗಳನ್ನು ತಲೆಯ ಮೇಲೆ ಹೊತ್ತು ತಮಟೆ, ಮಂಗಳವಾದ್ಯದೊಂದಿಗೆ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ಅಂತಿಮವಾಗಿ ಊರ ಹೊರ ವಲಯದಲ್ಲಿರುವ ವೀರಭದ್ರೇಶ್ವರಸ್ವಾಮಿ ಭದ್ರಕಾಳಿ ದೇಗುಲಕ್ಕೆ ಸಾಗಿತು.


ಹರಕೆ ಹೊತ್ತ ಭಕ್ತರು ಬಾಯಿಬೀಗ ಧರಿಸಿ ಉತ್ಸವಮೂರ್ತಿ ಜತೆ ಸಾಗಿದರು.ದೇವರುಗಳಿಗೆ ಜೈಕಾರ ಹಾಕಲಾಯಿತು. ಅಂತಿಮವಾಗಿ ವೀರಭದ್ರೇಶ್ವರನ ಗುಡಿಯ ಪ್ರದಕ್ಷಿಣೆ ಹಾಕಿ ದೇವರ ದರ್ಶನ ಪಡೆಯಲಾಯಿತು. ತೀರ್ಥ ಪ್ರೋಕ್ಷಣೆ ಮಾಡಿಸಿಕೊಂಡು ಬಾಯಿಬೀಗ ಹರಕೆ ಒಪ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net