ಮಲ್ಲಯ್ಯನಪುರದಲ್ಲಿ ಅದ್ದೂರಿ ಕೃಷ್ಣ ಜನ್ಮಾಷ್ಟಮಿ

16 HANUR 4
Published on

ಹನೂರು: ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಶನಿವಾರ ಯಾದವ ಸಮುದಾಯದ ಜನತೆ ಕೃಷ್ಣ ಜನ್ಮಾಷ್ಟಮಿಯನ್ನು ವಿಜೃಂಭಣೆಯಿಂದ ಆಚರಿಸಿದರು.

ಗ್ರಾಮದ ಸರ್ಕಾರಿ ಶಾಲೆಯ ಮುಂಭಾಗದಲ್ಲಿ ಕೃಷ್ಣನ ಮೂರ್ತಿಯನ್ನು ಪ್ರತಿಷ್ಟಾಪಿಸಿ ವಿವಿಧ ಪುಷ್ಪಗಳಿಂದ ಸಿಂಗರಿಸಿ ಪುಷ್ಪನಮನ ಹಾಗೂ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.

ತಾಲೂಕಿನ 13 ಗ್ರಾಮಗಳಿಂದ ಆಗಮಿಸಿದ ಯಾದವ ಸಮುದಾಯದ ಜನತೆ ಒಟ್ಟುಗೂಡಿ ಹಾಡಿನೊಂದಿಗೆ ಭಜನೆ ಹಾಗೂ ಗೋಪಿಶ್ರೀ ಕುಣಿತ ಪ್ರದರ್ಶಿಸಿದರು. ಮಹಿಳೆಯರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಇನ್ನು ಪುಟಾಣಿಗಳು ಕೃಷ್ಣನ ವೇಷ ಧರಿಸಿ ಸಂಭ್ರಮಿಸಿದರು. ಪಾಲಕರು ಸೆಲ್ಫಿ ತೆಗೆದುಕೊಂಡು ಖುಷಿ ಪಟ್ಟರು. ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಅನ್ನ ಸಂತರ್ಪಣೆ ನಡೆಯಿತು.

ರೈತ ಸಂಘದ ತಾಲೂಕು ಅಧ್ಯಕ್ಷ ಚಿಕ್ಕರಾಜು ಮಾತನಾಡಿ, ಧರ್ಮವನ್ನು ನಾವು ರಕ್ಷಿಸಿದರೆ, ಧರ್ಮ ನಮ್ಮನ್ನು ರಕ್ಷಿಸುತ್ತದೆ ಎನ್ನುವ ಹಾಗೆ ಶ್ರೀ ಕೃಷ್ಣ ಅಧರ್ಮದ ವಿರುದ್ಧ ಹೋರಾಟ ನಡೆಸಿ ಅವತಾರ ಪುರುಷ ಎನ್ನಿಸಿಕೊಂಡಿದ್ದಾರೆ. ಶ್ರೀ ಕೃಷ್ಣ ಅವತರಿಸಿದ ಶುಭ ದಿನವನ್ನು ಶ್ರೀ ಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸಲಾಗುತ್ತಿದೆ. ಇದರಿಂದ ಭಕ್ತಿಯ ಜತೆಗೆ ಬಾಂಧವ್ಯವೂ ವೃದ್ಧಿಸುತ್ತದೆ. ಈ ಬಗ್ಗೆ ಪ್ರತಿಯೊಬ್ಬರೂ ಮನದಟ್ಟು ಮಾಡಿಕೊಳ್ಳುವುದರ ಜತೆಗೆ ಸಮುದಾಯ ಅಭಿವೃದ್ಧಿಯ ಕಡೆ ಗಮನಹರಿಸಬೇಕು ಎಂದು ತಿಳಿಸಿದರು.

ವಿವಿಧ ಗ್ರಾಮಗಳ ಮುಖಂಡರಾದ ರಾಮಯ್ಯ, ಮಾದೇಶ್, ಗಣೇಶ್, ಪರಶುರಾಮ್, ರಾಜಗೋಪಾಲ್, ನಾಗರಾಜು, ಪ್ರದೀಪ್, ದುಂಡುನಾಯ್ಕ, ನಾಗೇಂದ್ರ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net