ಕೃಷಿಯಲ್ಲಿ ಖುಷಿ ಕಂಡ ಪದವೀಧರ

negilayogi1
Published on

*  ಸಾವಯವ ಗೊಬ್ಬರಕ್ಕೆ ಒತ್ತು

* ಮಿಶ್ರ ಬೇಸಾಯ ಪದ್ಧತಿ ಅನುಕರಣೆ

* ಕುಟುಂಬ ಬೆನ್ನೆಲುಬು

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ಮಾವು, ತೆಂಗು, ಅಡಕೆ ತೋಟದಲ್ಲಿ ಸಮಗ್ರ ಕೃಷಿ ಅನುಸರಿಸುವ ಮೂಲಕ ಕೃಷಿಯಲ್ಲಿ ಖುಷಿ ಕಾಣುತ್ತಿರುವ  ರಾಮನಗರ ತಾಲೂಕಿನ ಕೂಟಗಲ್​ ಹೋಬಳಿಯ ನಿಜಿಯಪ್ಪನದೊಡ್ಡಿ ಗ್ರಾಮದ ರೈತ ಎನ್​.ಎಸ್​. ಶಶಿಕುಮಾರ್​ ಎಲ್ಲರಿಗೂ ಮಾದರಿಯಾಗಿದ್ದಾರೆ.

ಎನ್​.ಎಸ್​. ಶಶಿಕುಮಾರ್​ ಬಿಎ ಪದವೀಧರನಾಗಿದ್ದು, ವ್ಯವಸಾಯದಲ್ಲಿ ಆಸಕ್ತಿ ಹೊಂದಿ ಸುಮಾರು 8 ಎಕರೆ ಜಮೀನಿನಲ್ಲಿ ಮಾವು, ತೆಂಗು, ಅಡಕೆ ಬೆಳೆಗಳ ಜತೆಗೆ ಶ್ರೀಗಂಧ ಅರಣ್ಯ ಕೃಷಿ ನಡೆಸುತ್ತಿದ್ದಾರೆ. ಸದಾ ಕೃಷಿಯಲ್ಲಿ ಯಶಸ್ಸು ಕಾಣಬೇಕೆಂಬುದು ಹಂಬಲವಿರುವ ಯುವ ರೈತನ ಕೃಷಿಗೆ ಕುಟುಂಬ ಬೆನ್ನೆಲುಬಾಗಿ ನಿಂತಿದೆ. ಆಧುನಿಕ ಕೃಷಿ ಪದ್ಧತಿ ಮೂಲಕ ಮಾವು, ಅಡಕೆ, ಶ್ರೀಗಂಧ, ತೆಂಗಿನ ಜತೆಗೆ ವಿವಿಧ ತರಕಾರಿ ಬೆಳೆಯುತ್ತಿದ್ದು, ಕೃಷಿಯಲ್ಲಿ ಲಾಭದತ್ತ ಮುಖ ಮಾಡಿ ಮಾದರಿ ರೈತನಾಗಿ ಗುರುತಿಸಿಕೊಂಡಿದ್ದಾರೆ.

ತೆಂಗು, ಅಡಕೆ ನೆಟ್ಟು ಸುಮ್ಮನಾಗದ ಇವರು ತೋಟದ ಖಾಲಿ ಜಾಗದಲ್ಲಿ ಸೌತೆ, ಟೊಮ್ಯಾಟೊ, ಬೀನ್ಸ್​, ಬದನೆ, ಹುರುಳಿ, ಎಲೆಕೋಸು, ಹೂ ಕೋಸು, ಬೆಂಡೆ ಮತ್ತಿತರ ತರಕಾರಿ ಬೆಳೆಗಳನ್ನು ಮಿಶ್ರ ಬೇಸಾಯ ಪದ್ಧತಿ ಅನುಸರಿಸಿ ಫಸಲು ಪಡೆಯುತ್ತಿದ್ದಾರೆ. ನೀರಿಗೆ ಎರಡು ಬೋರ್​ವೆಲ್​ ಕೊರೆಸಿಕೊಂಡಿದ್ದಾರೆ.

ಕೊಟ್ಟಿಗೆ ಗೊಬ್ಬರ, ಸಾವಯವ ಗೊಬ್ಬರಕ್ಕೆ ಒತ್ತುಕೊಟ್ಟಿದ್ದು, ಉತ್ತಮ ತೋಟ ನಿರ್ವಹಣೆ ಮಾಡಿ ಕೃಷಿಯಲ್ಲಿ ಯಶಸ್ಸು ಕಂಡುಕೊಂಡಿದ್ದಾರೆ.

ಹನಿ ನೀರಾವರಿ

ಬೋರ್​ವೆಲ್​ನಲ್ಲಿ ಹೆಚ್ಚಿನ ನೀರಿದ್ದರೂ ಮಿತ ಬಳಕೆಗೆ ಒತ್ತು ಕೊಟ್ಟಿದ್ದು, ಹನಿ ನೀರಾವರಿ ಅಳವಡಿಸಿಕೊಂಡಿದ್ದಾರೆ.  ಅಂತೆಯೇ, ಮಾರುಕಟ್ಟೆಯಲ್ಲಿ ಬೆಲೆ ಇರುವ ಸಮಯ ನೋಡಿಕೊಂಡು ತರಕಾರಿ ಬೆಳೆಯುವ ಮೂಲಕ  ಉತ್ತಮ ಮಾರುಕಟ್ಟೆ ಕಂಡುಕೊಂಡಿದ್ದು, ಹೆಚ್ಚಿನ ಲಾಭಗಳಿಸುತ್ತಿದ್ದಾರೆ. ಹಾಗೆಯೇ ತೆಂಗು, ಅಡಕೆ ತೋಟದಲ್ಲಿ ಮೆಣಸು, ಏಲಕ್ಕಿ ಬೆಳೆಯಲು ಮುಂದಡಿ ಇಟ್ಟಿರುವುದು ಮತ್ತೊಂದು ವಿಶೇಷ.

ಒಂದೊಂದು ಬೆಳೆ

ಒಂದು ಜಾಗದಲ್ಲಿ ಸೌತೆ ಬೆಳೆದರೆ ಅದೇ ಜಾಗದಲ್ಲಿ ಪುನ@ ಬೇರೆ ತರಕಾರಿ ಬೆಳೆಯುವುದನ್ನು ಅನುಸರಿಸುತ್ತಿದ್ದಾರೆ.  ಹೀಗೆ ಬೆಳೆಗಳಲ್ಲಿ ಬದಲಾವಣೆ ಮಾಡಿಕೊಂಡು ಭೂಮಿಯ ಫಲವತ್ತತೆಗೂ ಹೆಚ್ಚಿನ ಆದ್ಯತೆ ನೀಡಿದ್ದಾರೆ.

ಮೆಣಸು ಕೃಷಿ

ಮಲೆನಾಡು ಸೇರಿ ರಾಜ್ಯದ ಸೀಮಿತ ಪ್ರದೇಶದಲ್ಲಷ್ಟೇ ಮೆಣಸು ಬೆಳೆಯಲಾಗುತ್ತಿತ್ತು. ಈಗ, ರಾಮನಗರ ಜಿಲ್ಲೆಯಲ್ಲಿ ಬೆರಳಣಿಕೆ ರೈತರು ಮೆಣಸು ಕೃಷಿಯತ್ತ ಚಿತ್ತ ಹರಿಸಿದ್ದಾರೆ. ಅಂತೆಯೇ, ಶಶಿಕುಮಾರ್​ ಕೂಡ ಪ್ರಾಯೋಗಿಕವಾಗಿ 50 ಸಸಿಗಳ ಕೃಷಿಗೆ ಮುಂದಾಗಿ ಅದರಲ್ಲಿ ಯಶಸ್ಸು ಕಂಡು ಉತ್ತಮ ಫಸಲು ಕಾಣುತ್ತಿದ್ದಾರೆ. ಜತೆಗೆ ಏಲಕ್ಕಿ ಬೆಳೆಯುತ್ತಿದ್ದಾರೆ.

ಲಾಭದಾಯಕ ನುಗ್ಗೆ

ಜಮೀನಿನ ಸುತ್ತ ನುಗ್ಗೆ ಬೆಳೆಯುವ ಮೂಲಕ ಅದರಲ್ಲೂ ಲಾಭ ಕಾಣುತ್ತಿದ್ದಾರೆ. ಜತೆಗೆ ಬಟರ್​ ್ರೂಟ್​, ನಿಂಬೆ ಮತ್ತಿತರ ಹಣ್ಣಿನ ಗಿಡಗಳನ್ನು ಬೆಳೆದಿದ್ದಾರೆ.

ಕೈ ಹಿಡಿದ ಹೈನುಗಾರಿಕೆ

ಉಪ ಕಸುಬಾಗಿ ಹೈನುಗಾರಿಕೆಯನ್ನು ಕೈಗೊಂಡಿದ್ದು, ನಾಲ್ಕು ಮಿಶ್ರತಳಿ ಹಸುಗಳನ್ನು ಸಾಕಿದ್ದಾರೆ. ಜತೆಗೆ ಜಮೀನಿಗೆ ಈ ಹಸುಗಳಿಂದಲೇ ಕೊಟ್ಟಿಗೆ ಗೊಬ್ಬರ ಪಡೆಯುತ್ತಿದ್ದಾರೆ. ಹಸು ಸಾಕಣೆ ಜತೆಗೆ ಮೇಕೆಯೂ ವರದಾನವಾಗಿದೆ.

ಕೃಷಿಯಲ್ಲಿ ಖುಷಿ ಕಾಣುತ್ತಿದ್ದು, ಇದಕ್ಕೆ ನಮ್ಮ ಪಾಲಕರು ಬೆನ್ನೆಲುಬಾಗಿ ನಿಂತು ಪ್ರೋತ್ಸಾಹ ನೀಡುತ್ತಿದ್ದಾರೆ. ತರಕಾರಿ ಬೆಳೆಗಳು ಕೈ ಹಿಡಿದಿವೆ. ಮಾರುಕಟ್ಟೆಯಲ್ಲಿ ಒಂದೊಂದು ಬಾರಿ ಬೆಲೆ ಸಿಗದಿರಬಹುದು. ಆದರೆ ಮತ್ತೆ ಬೆಲೆ ಸಿಕ್ಕಾಗ ಆ ನಷ್ಟ ಸರಿದೂಗಿಸಿಕೊಂಡು ಕೃಷಿಯಲ್ಲಿ ಖುಷಿ ಕಾಣುತ್ತಿದ್ದೇನೆ. ತೋಟಗಾರಿಕೆ, ಕೃಷಿ ಇಲಾಖೆಯೂ ಉತ್ತಮ ಸಹಕಾರ ನೀಡುತ್ತಿದೆ.

> ಎನ್​.ಎಸ್​. ಶಶಿಕುಮಾರ್​, ಯುವ ರೈತ, ನಿಜಿಯಪ್ಪನದೊಡ್ಡಿ.

ಶಶಿಕುಮಾರ್​ ಪ್ರಗತಿಪರ ಯುವ ಕೃಷಿಕರಾಗಿದ್ದು, ಹೊಸ ಹೊಸ ಬೆಳೆ ಬಗ್ಗೆ ತಿಳಿವಳಿಕೆ ಪಡೆಯುತ್ತಾರೆ. ಮಿಶ್ರ ಬೇಸಾಯ ಪದ್ಧತಿಯಲ್ಲಿ ಅರಣ್ಯ ಕೃಷಿ ಜತೆಗೆ ತರಕಾರಿ ಬೆಳೆ ಬೆಳೆದು ಕೃಷಿಯಲ್ಲಿ ಲಾಭದತ್ತ ಮುಖ ಮಾಡಿದ್ದಾರೆ. ಕೃಷಿ ಇಲಾಖೆ ಕಾಲಕಾಲಕ್ಕೆ ಸರ್ಕಾರದ ಸವಲತ್ತು ಪ್ರಯೋಜನಗಳ ಬಗ್ಗೆ ಮಾಹಿತಿ ತಿಳಿಸಿ ಅವರ ಕೃಷಿಗೆ ಉತ್ತೇಜನ ನೀಡುತ್ತಿದೆ.

> ಸುಂದರಶ್ರೀ, ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ, ಆತ್ಮಯೋಜನೆ, ರೈತ ಸಂಪರ್ಕ ಕೇಂದ್ರ, ಕೂಟಗಲ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net