

ಹಳಿಯಾಳ: ತೈಲ ಮತ್ತು ಅಗತ್ಯ ವಸ್ತುಗಳ ದರ ಹೆಚ್ಚಳದಿಂದ ದೇಶದ ಪ್ರತಿಯೊಬ್ಬ ನಾಗರಿಕ ಸಂಕಷ್ಟಕ್ಕೊಳಗಾಗಿದ್ದಾನೆ. ಕೇಂದ್ರ ಸರ್ಕಾರಕ್ಕೆ ಜನಸಾಮಾನ್ಯರ ಬಗ್ಗೆ ಕಾಳಜಿ ಇಲ್ಲ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.
ತಾಲೂಕಿನ ಮುರ್ಕವಾಡ ಗ್ರಾಮದ ಪೆಟ್ರೋಲ್ ಬಂಕ್ ಎದುರು ಮಂಗಳವಾರ ಕಾಂಗ್ರೆಸ್ ಕಾರ್ಯಕರ್ತರು ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಅಚ್ಛೇದಿನ್ ನೀಡುವ ಭರವಸೆಯಿಂದ ಅಧಿಕಾರಕ್ಕೇರಿದ ಬಿಜೆಪಿ ತಾನು ಮಾಡಿದ ವಾಗ್ದಾನಗಳಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದೆ. ರಾಜ್ಯದ ಬಿಜೆಪಿ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಆಗುತ್ತಿಲ್ಲ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಭಾಸ ಕೊರ್ವೆಕರ, ಜಿ.ಪಂ. ಮಾಜಿ ಉಪಾಧ್ಯಕ್ಷ ಸಂತೋಷ ರೇಣಕೆ, ಸದಸ್ಯ ಕೃಷ್ಣಾ ಪಾಟೀಲ, ನಂದಾ ಕೊರ್ವೆಕರ, ಸಂಜು ಮಿಶಾಳೆ, ಪುರಸಭೆ ಅಧ್ಯಕ್ಷ ಅಜರ್ ಬಸರಿಕಟ್ಟಿ, ಫಯಾಜ್ ಶೇಖ್, ಯುವ ಕಾಂಗ್ರೆಸ್ ಅಧ್ಯಕ್ಷ ರವಿ ತೋರಣಗಟ್ಟಿ, ವೈ.ಪಿ. ಕೊರ್ವೆಕರ, ಪ್ರಮೋದ ಪಾಟೀಲ ಇತರರು ಇದ್ದರು.
ಬಡವರ ವಿರೋಧಿ:
ಹಳಿಯಾಳ: ಕೇಂದ್ರದ ಬಿಜೆಪಿ ಸರ್ಕಾರ ಬಡವರ ವಿರೋಧಿ ಹಾಗೂ ಕಾರ್ಪೇರೇಟ್ ಪರ ನಿಲುವುಗಳಿಂದಾಗಿ ದೇಶ ಅತ್ಯಂತ ವೇಗವಾಗಿ ಬಡತನಕ್ಕೆ ಜಾರುತ್ತಿದೆ. ಇದರಿಂದ ನಿರುದ್ಯೋಗ ಹೆಚ್ಚುತ್ತಿದ್ದು, ಕಳೆದ 45 ವರ್ಷಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಅಂದರೆ ಶೇ. 11.6 ರಷ್ಟು ನಿರುದ್ಯೋಗ ಹೆಚ್ಚಾಗಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಡಳಿತ ವೈಪಲ್ಯಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು, ಕೋವಿಡ್ ಪರಿಸ್ಥಿತಿಯನ್ನು ಎದುರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಕೋವಿಡ್ ಲಸಿಕೆ ವಿತರಣೆಯು ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿದರು.